ಬೆಂಗಳೂರು : ಪಾನೀಯಗಳ ತಯಾರಿಕೆಗೆ ಹೆಸರಾಗಿರುವ ಆ್ಯಬ್ ಇನ್ಬೇವ್ ಇಂಡಿಯಾ ಕಂಪನಿ ರಾಜ್ಯದಲ್ಲಿ ತನ್ನ ಉತ್ಪಾದನೆ ಹೆಚ್ಚಿಸಲು 400 ಕೋಟಿ ರೂ. ಹೂಡಲು ಒಪ್ಪಿಕೊಂಡಿದೆ. ಜೊತೆಗೆ, ಈಗಾಗಲೇ ರಾಜ್ಯದಲ್ಲಿ 900 ಮಿಲಿಯನ್ ಡಾಲರ್ ಹೂಡಿಕೆ ಮಾಡಿರುವ ಎನ್ಟಿಟಿ ಡೇಟಾ ಕಂಪನಿಯು ಮುಂಬರುವ ವರ್ಷಗಳಲ್ಲಿ ನಮ್ಮಲ್ಲಿ ಇನ್ನೂ 2 ಬಿಲಿಯನ್ ಡಾಲರ್ ಬಂಡವಾಳ ತೊಡಗಿಸಲು ತೀರ್ಮಾನಿಸಿದೆ. ಈ ಬಗ್ಗೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ಸ್ವಿಟ್ಜರ್ಲ್ಯಾಂಡ್ನ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದ ಮೂರನೆಯ ದಿನವಾದ ಬುಧವಾರ ಎಂ ಬಿ ಪಾಟೀಲ್ ನೇತೃತ್ವದ ನಿಯೋಗವು ಹೆಚ್.ಪಿ, ಆ್ಯಬ್ ಇನ್ಬೇವ್ ಬ್ರೂವರೀಸ್, ಎಚ್.ಸಿ.ಎಲ್, ಗೆನಾತ್ರಿ (ಪೆಟ್ರೋನಾಸ್) ಎನ್ಟಿಟಿ ಡೇಟಾ, ಸಿಸ್ಕೋ, ಸ್ವಿಗ್ಗಿ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಹೆಚ್.ಪಿ. (ಹ್ಯೂಲೆಟ್ ಪೆಕಾರ್ಡ್) ಕಂಪನಿಯು ಇನ್ನೂ 4,000 ಉದ್ಯೋಗಗಳನ್ನು ಸೃಷ್ಟಿಸಲು ನಿರ್ಧರಿಸಿದ್ದು, ಬೆಂಗಳೂರಿನ ಮಹದೇವಪುರದಲ್ಲಿ ಹೊಸದಾಗಿ ಎರಡು ಸುಸಜ್ಜಿತ ಕಚೇರಿಗಳನ್ನು ಆರಂಭಿಸಲಿದೆ. ಜೊತೆಗೆ ಮೈಸೂರಿನಲ್ಲಿ ಸರ್ವರ್ ತಯಾರಿಕಾ ಘಟಕ ಆರಂಭಿಸಲು ಅದು ಮಾತುಕತೆ ನಡೆಸುತ್ತಿದೆ. ಇದು ಸಾಧ್ಯವಾದರೆ 1 ಬಿಲಿಯನ್ ಡಾಲರ್ ವಾರ್ಷಿಕ ವಹಿವಾಟು ಸಾಧ್ಯವಾಗಲಿದೆ. ಅಲ್ಲದೆ, ಎಚ್.ಪಿ ಕಂಪನಿಯು ರಾಜ್ಯದಲ್ಲಿ ತನ್ನ `ಗ್ಲೋಬಲ್ ಲೀಡರ್ ಶಿಪ್’ ಕಚೇರಿ ಹೊಂದಲು ಮನಸ್ಸು ಮಾಡಿದೆ ಎಂದು ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಪೆಟ್ರೋನಾಸ್ (ಗೆನಾತ್ರಿ) ಕಂಪನಿಯು ಶುದ್ಧ ಇಂಧನ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು, ರಾಜ್ಯದಲ್ಲಿ ಈ ವರ್ಷದ ಕೊನೆಯ ಹೊತ್ತಿಗೆ 30 ಗಿಗಾವ್ಯಾಟ್ ಮರುಬಳಕೆ ಮಾಡಹುದಾದ ಇಂಧನ ತಯಾರಿಸುವ ಗುರಿ ಹೊಂದಿದೆ. ಅಲ್ಲದೆ, ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ತ್ಯಾಜ್ಯ ನಿರ್ವಹಣೆಯನ್ನು ಅದು ವೈಜ್ಞಾನಿಕವಾಗಿ ಮಾಡಲು ಆಸಕ್ತಿ ಹೊಂದಿದೆ. ಈ ನಿಟ್ಟಿನಲ್ಲಿ ಅದು ರಾಜ್ಯ ಸರ್ಕಾರದೊಂದಿಗೆ ಸಹಭಾಗಿತ್ವ ಹೊಂದಲು ಬಯಸಿದೆ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ.
ಇದೇ ರೀತಿಯಲ್ಲಿ ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಸಿಸ್ಕೋ, ನಗರ ಸಂಚಾರ ವ್ಯವಸ್ಥೆಯೊಂದಿಗೆ ಸ್ವಿಗ್ಗಿ ವಿದ್ಯುತ್ ಚಾಲಿತ ವಾಹನ ಕ್ಷೇತ್ರದಲ್ಲಿ ವೋಲ್ವೋ ಕಂಪನಿಗಳು ಹೆಚ್ಚಿನ ಬಂಡವಾಳ ಹೂಡಲು ಮುಂದೆ ಬಂದಿವೆ. ಇವುಗಳ ಹೂಡಿಕೆ ಪ್ರಸ್ತಾವನೆಗೆ ರಾಜ್ಯ ಸರ್ಕಾರವು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಎಲ್ಲ ಬಗೆಯ ಸಹಕಾರ ಕೊಡುವ ಭರವಸೆ ನೀಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಈ ಹೂಡಿಕೆಗಳ ಸಂಬಂಧ ಹೆಚ್ಸಿಎಲ್ ಕಂಪನಿಯ ಮುಖ್ಯಸ್ಥ ಬಾಲಸುಬ್ರಮಣಿಯನ್, ಪೆಟ್ರೋನಾಸ್ ಕಂಪನಿಯ ಸಿಇಒ ಸುಶೀಲ್ ಪುರೋಹಿತ್, ಸಿಸ್ಕೋದ ಪ್ರಧಾನ ವ್ಯವಸ್ಥಾಪಕ ಜೀತು ಪಟೇಲ್ ಮುಂತಾದವರೊಂದಿಗೆ ವಿಸ್ತೃತ ಮಾತುಕತೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ತೆಲಂಗಾಣದಲ್ಲಿ ವಿವಿಧ ಯೋಜನೆಗೆ 12,400 ಕೋಟಿ ಹೂಡಿಕೆ ಒಡಂಬಡಿಕೆ ಸಹಿ ಹಾಕಿದ ಅದಾನಿ