ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳು ಇಂದಿನಿಂದ ಪ್ರಥಮ ಪಿಯು ಪ್ರವೇಶ ಪ್ರಕ್ರಿಯೆ ಆರಂಭ ಮಾಡಲಿವೆ. ಇದಕ್ಕೆ ಸಂಬಂಧಿಸಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಮಹಾಮಾರಿ ಕೊರೊನಾ ವೈರಸ್ ಕಾರಣ ಕಳೆದ ಕೆಲ ತಿಂಗಳಿಂದ ಶೈಕ್ಷಣಿಕ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆದರೆ ಇದೀಗ ಅದಕ್ಕೆ ಚಾಲನೆ ಸಿಕ್ಕಿದ್ದು, 2020-21ನೇ ಸಾಲಿನ ಪ್ರಥಮ ಪಿಯುಸಿ ದಾಖಲಾತಿ ಆರಂಭಗೊಳ್ಳಲಿದೆ.
ಇಂದಿನಿಂದ ಮುಂದಿನ ನಾಲ್ಕು ದಿನಗಳ ಕಾಲ ಪ್ರಥಮ ಪಿಯುಸಿ ದಾಖಲಾತಿ ಅರ್ಜಿ ನೀಡಲು ಸೂಚಿಸಲಾಗಿದ್ದು, ಇದರ ಜತೆಗೆ ಹೆಚ್ಚಿನ ಶುಲ್ಕ ಪಡೆದುಕೊಳ್ಳದಂತೆ ಖಾಸಗಿ ಕಾಲೇಜ್ಗಳಿಗೆ ಸೂಚನೆ ನೀಡಲಾಗಿದೆ.
ಕಳೆದ ವರ್ಷಕ್ಕಿಂತಲೂ ಕಡಿಮೆ ಶುಲ್ಕ ಪಡೆದುಕೊಳ್ಳಲು ಸೂಚನೆ ನೀಡಲಾಗಿದ್ದು, ಕಾಲೇಜು ಆವರಣದಲ್ಲಿ ಗುಂಪು ಸೇರಲು ಅವಕಾಶ ನೀಡಬಾರದು ಎಂದು ತಿಳಿಸಿದೆ. ಈಗಾಗಲೇ ರಾಜ್ಯದಲ್ಲಿ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿ ಅನುಸರಣೆ ಮಾಡುವುದು ಕಡ್ಡಾಯವಾಗಿದೆ.