ಬೆಂಗಳೂರು: 1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವು ಹೈಕೋರ್ಟ್ ನಿರ್ದೇಶನದಂತೆ ಅಂತಿಮ ಪರಿಷ್ಕೃತ ಪಟ್ಟಿ ಪ್ರಕಟಿಸಿದೆ.
ಹೈಕೋರ್ಟ್ ನೀಡಿದ್ದ 3ನೇ ನಿರ್ದೇಶನವನ್ನು ಸರ್ಕಾರ ಮತ್ತು ಆಯೋಗವು ಸರಿಯಾಗಿ ಪಾಲನೆ ಮಾಡಿಲ್ಲ ಎಂದು ಬಾಧಿತ ಚನ್ನಪ್ಪ ಮತ್ತಿತರರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಹೀಗಾಗಿ ಕರ್ನಾಟಕ ಲೋಕಸೇವಾ ಆಯೋಗವು ಪರಿಷ್ಕೃತ ಪಟ್ಟಿಯನ್ನು ಸರಿಪಡಿಸಲಾಗುವುದು ಎಂದು 2020ರ ಡಿಸೆಂಬರ್ 4ರಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು. ಅದರಂತೆ ಆಯೋಗವು ಅಂತಿಮ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದೆ.
1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವು ಹೈಕೋರ್ಟ್ ನಿರ್ದೇಶನದಂತೆ ಪ್ರಕಟಿಸಿರುವ ಅಂತಿಮ ಪರಿಷ್ಕೃತ ಆಯ್ಕೆಪಟ್ಟಿಯಲ್ಲೂ ಲೋಪದೋಷಗಳಿವೆ ಎಂಬ ಆರೋಪ ಕೇಳಿಬಂದಿದೆ. ಲೋಕಸೇವಾ ಆಯೋಗ ಪ್ರಕಟಿಸಿದ್ದ 2014ರ ನವೆಂಬರ್ 11ರಂದು (ವೆಬ್ ಹೋಸ್ಟ್ ಪಟ್ಟಿ)ಯಲ್ಲಿ ಅನೇಕ ಅಧಿಕಾರಿಗಳ ಸ್ಥಾನ ಪಲ್ಲಟಗೊಂಡಿತ್ತು. ಹೈಕೋರ್ಟ್‌ನ ಎರಡನೇ ನಿರ್ದೇಶನದಂತೆ ಆಯೋಗ ಜನವರಿ 25, 2019ರಂದು ಮತ್ತು 3ನೇ ನಿರ್ದೇಶನದಂತೆ 2019ರ ಆಗಸ್ಟ್ 22ರಂದು ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿತ್ತು.
ಇದನ್ನೂ ಓದಿ:ಬೆಂಗಳೂರಲ್ಲಿ ಮಹಿಳೆ ಆತ್ಮಹತ್ಯೆ: ವರದಕ್ಷಿಣೆಗಾಗಿ ಗಂಡನ ಮನೆಯವರಿಂದ ಕೊಲೆ ಆರೋಪ
ಹೈಕೋರ್ಟ್‌ನ ನಿರ್ದೇಶನದಂತೆ ಆಯೋಗವು ಪ್ರಕಟಿಸಿದ್ದ ಈ ಎರಡೂ ಪಟ್ಟಿಗಳಲ್ಲೂ ಕರಿಗೌಡ ಸೇರಿದಂತೆ 8 ಮಂದಿ ಅಧಿಕಾರಿಗಳ ಹುದ್ದೆಗಳನ್ನು 2014ರಲ್ಲಿದ್ದಂತೆಯೇ ಮುಂದುವರೆಸಿತ್ತು. ಅಲ್ಲದೆ ರಾಜ್ಯ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಿಇಒ ಶಿವಶಂಕರ್ ಸೇರಿದಂತೆ ಒಟ್ಟು 8 ಮಂದಿ ಅಧಿಕಾರಿಗಳು ಅಂತಿಮ ಪರಿಷ್ಕೃತ ಪಟ್ಟಿಯ ಪ್ರಕಾರ ಉಪ ವಿಭಾಗಾಧಿಕಾರಿ ಹುದ್ದೆಯನ್ನು ಕಳೆದುಕೊಂಡಿದ್ದಾರೆ.