ಬೆಂಗಳೂರು: ಬಿಬಿಎಂಪಿ ನಡೆಸಿರುವ ಸಮೀಕ್ಷೆಯಲ್ಲಿ ನಗರದಾದ್ಯಂತ ಮಲಹೊರುವ ಪದ್ಧತಿ ಈಗಲೂ ಜೀವಂತವಾಗಿ ಇರುವುದು ದೃಢಪಟ್ಟಿದೆ.
2013ರಲ್ಲಿ ರಾಜ್ಯ ಸರ್ಕಾರ ಮಲಹೊರುವ ಪದ್ಧತಿ ನಿಷೇಧ ಕಾಯ್ದೆ ಮಾಡಿದೆ. ಆದರೆ, ಬೆಂಗಳೂರು ಈ ಅನಿಷ್ಟ ಪದ್ಧತಿ ಈಗಲೂ ಜೀವಂತವಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸಿರುವ ವರದಿಯಲ್ಲಿ ನಗರದ ಎಂಟು ವಲಯಗಳಲ್ಲಿ ಒಟ್ಟು 1,424 ಮಲಹೊರುವವರು ಇರುವುದು ತಿಳಿದುಬಂದಿದೆ.
ಬಚ್ಚಲು, ಶೌಚ ಗುಂಡಿಗಳ ಸ್ವಚ್ಛತೆಗೆ ಕಾರ್ಮಿಕರನ್ನು ಬಳಸಿಕೊಳ್ಳುವುದು ನಿಷೇಧಿಸಲಾಗಿದೆ. ಅವರ, ಬದಲಿಗೆ ಯಂತ್ರಗಳನ್ನು ಬಳಸಿಕೊಳ್ಳಬೇಕು ಎಂದು ಕಾಯ್ದೆಯಲ್ಲಿ ಸೂಚಿಸಲಾಗಿದೆ. ಆದರೆ, ಒಳಚರಂಡಿ, ಸೆಪ್ಟಿಕ್ ಟ್ಯಾಂಕ್ ಹಾಗೂ ತೆರೆದ ಚರಂಡಿಗಳು ಸೇರಿದಂತೆ ವಿವಿಧೆಡೆ ಸಫಾಯಿ ಕರ್ಮಚಾರಿಗಳು ಇಳಿದು ಸ್ವಚ್ಛತೆ ಮಾಡುತ್ತಿದ್ದಾರೆ. ಇವರಿಗೆ ಯಾವುದೇ ಸುರಕ್ಷತಾ ಉಪಕರಣಗಳನ್ನು ನೀಡದೆ ಬರಿಗೈ, ಬರಿಮೈಯಲ್ಲಿ ಮಲಹೊರಿಸುತ್ತಿರುವುದು ಮುಂದುವರೆದಿದೆ. ಇದರ ಜತೆಗೆ ಅಲ್ಲಲ್ಲಿ ಮೃತಪಟ್ಟ ಘಟನೆಗಳು ವರದಿ ಆಗಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ.
ನಗರದ ವಲಯವಾರು ಮಲಹೊರುವವರ ವಿವರವನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಸರ್ಕಾರದ ಆದೇಶದ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿ ತಿಳಿಸಿದ್ದಾರೆ.
2013-14ನೇ ಸಾಲಿನಲ್ಲಿ 201 ಮಲಹೊರುವವರು ಇರುವುದು ವರದಿಯಾಗಿತ್ತು. 2020-21ರ ವೇಳೆಗೆ ಅದು 1,424ಕ್ಕೆ ಏರಿಕೆ ಆಗಿರುವುದು ಆಘಾತವುಂಟು ಮಾಡಿದೆ. ಹಲವು ಅತ್ಯಾಧುನಿಕ ತಂತ್ರಜ್ಞಾನದ ಹೊರತಾಗಿಯೂ ಮ್ಯಾನ್ವಲ್ ಸ್ಕ್ಯಾವೆಂಜರ್ಸ್‌ಗಳ ಬಳಕೆಗೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಮ್ಯಾನ್ವಲ್ ಸ್ಕ್ಯಾವೆಂಜರ್ಸ್‌ಗಳ ಬಳಕೆ ಕಂಡುಬಂದರೂ ಗಂಭೀರವಾಗಿ ಪರಿಗಣಿಸಿ ಆಯಾ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಎಚ್ಚರಿಸಿದ್ದರು.
ವಲಯ | 2013-14 | 2020-21 |
ಪೂರ್ವ | 90 | 618 |
ಪಶ್ಚಿಮ | -- | 269 |
ದಕ್ಷಿಣ | -- | 65 |
ಮಹದೇವಪುರ | -- | 111 |
ಯಲಹಂಕ | 49 | 185 |
ದಾಸರಹಳ್ಳಿ | 16 | 37 |
ಬೊಮ್ಮನಹಳ್ಳಿ | 11 | 68 |
ರಾಜರಾಜೇಶ್ವರಿ ನಗರ | 35 | 71 |
ಒಟ್ಟು | 201 | 1424 |