ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ಇಂದು ಒಂದೇ ದಿನ 14 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ 164 ಮಂದಿ ಸಾವನ್ನಪ್ಪಿದ್ದಾರೆ.
ಇಂದು ಒಂದೇ ದಿನ 397 ಹೊಸ ಪಾಸಿಟಿವ್ ಕೇಸ್ ಬಂದಿದ್ದು, 10,118ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇದರಲ್ಲಿ 6,151 ಮಂದಿ ಗುಣಮುಖರಾಗಿದ್ದರೇ, 3,799 ಪ್ರಕರಣಗಳು ಸಕ್ರಿಯವಾಗಿವೆ. ಇನ್ನು ಈವರೆಗೆ ರಾಜ್ಯದಲ್ಲಿ 5,39,247ಮಂದಿ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, 5,15,388 ಮಂದಿಗೆ ನೆಗೆಟಿವ್ ಬಂದಿದೆ. ಸುಮಾರು 38,909 ಮಂದಿ ಸೋಂಕಿತರ ಸಂಪರ್ಕ ಹೊಂದಿದ್ದಾರೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ವೈದ್ಯರಿಗೂ ಕೊರೊನಾ ಸೋಂಕು ತಗಲಿದ್ದು ಇದಕ್ಕಾಗಿ ಬೆಂಗಳೂರಿನ ಜಯನಗರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ 1/3 ರಷ್ಟು ಐಸಿಯು/ವೆಂಟಿಲೇಟರ್ ಸೌಲಭ್ಯವುಳ್ಳ ಹಾಸಿಗೆಗಳನ್ನು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಇತರೆ ಸಿಬ್ಬಂದಿಗಳಿಗೆ ಮೀಸಲಿಡಲು ಆದೇಶಿಸಲಾಗಿದೆ.
ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕ್ಲಿನಿಕ್ ಹಾಗೂ ಗಂಟಲು ದ್ರವದ ಮಾದರಿ ಸಂಗ್ರಹ ಕೇಂದ್ರಗಳನ್ನು ಆರಂಭಿಸುವಂತೆ ಆದೇಶಿಸಲಾಗಿದೆ. ದಿನೇ ದಿನೇ ತಪಾಸಣಾ ಸಾಮರ್ಥ್ಯ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲೆಡೆ ಗಂಟಲು ದ್ರವದ ಮಾದರಿ ಸಂಗ್ರಹಣೆ ಮಾಡಲು ಫೀವರ್ ಕ್ಲಿನಿಕ್ ಸಂಖ್ಯೆ ಹೆಚ್ಚಿಸಲು ಅಗತ್ಯವಿದೆ.
ಎಲ್ಲಾ ಖಾಸಗಿ ಆಸ್ಪತ್ರೆಗಳು, ಕಾರ್ಪೊರೇಟ್ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳಲ್ಲಿ ಕೋವಿಡ್ -19ಗೆ ಶೇಕಡ 50 ರಷ್ಟು ಹಾಸಿಗೆಗಳನ್ನು ಸರ್ಕಾರದೊಂದಿಗೆ ಕಡ್ಡಾಯ ಹಂಚಿಕೆಗೆ ಸೂಚನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯುವ ಶಿಫಾರಸ್ಸು ಪಡೆದ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಆದರೆ ಸ್ವತಃ ಅವರೇ ಹಣ ಪಾವತಿ ಮಾಡಬೇಕು. ಸರ್ಕಾರದಿಂದ ಶಿಫಾರಸ್ಸು ಪಡೆದರೆ ಖಾಸಗಿಯಲ್ಲಿ ಚಿಕಿತ್ಸೆ ಉಚಿತ ಇರಲಿದೆ.