ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಹೆಸರಿನಲ್ಲಿ ನಕಲಿ ಸಹಿ ಹಾಕಿ 14.90 ಲಕ್ಷ ರೂ. ಬ್ಯಾಂಕ್ ಡ್ರಾ ಮಾಡಿ ತನ್ನ ಖಾತೆಗೆ ಜಮೆ ಮಾಡಿಕೊಂಡು ಪರಾರಿಯಾಗಿರುವ ಮನೆಗೆಲಸದವನ ವಿರುದ್ಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸಂಜಯ್ ಸಿರಗೌನಿ ಎಂಬುವವರು ನೀಡಿದ ದೂರಿನ ಮೇರೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಖಾಸಿಂ ಸಾಬ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಎಸ್.ಆರ್.ವಿಜಯ್ (84) ಆರೈಕೆಗಾಗಿ ಮೂರು ತಿಂಗಳ ಹಿಂದೆ ಖಾಸಿಂ ಸಾಬ್ ಎಂಬಾತನನ್ನು ಕೆಲಸಕ್ಕೆ ಸಂಜಯ್ ನಿಯೋಜಿಸಿದ್ದರು. ಆರಂಭದಲ್ಲಿ ಚೆನ್ನಾಗಿ ಆರೈಕೆ ಮಾಡಿ ಎಲ್ಲರ ವಿಶ್ವಾಸ ಸಂಪಾದಿಸಿದ್ದ. ಯೋಗಕ್ಷೇಮ ಜೊತೆಗೆ ಹಣದ ಅಗತ್ಯವಿದ್ದರೆ ಬ್ಯಾಂಕ್ ಗೆ ಹೋಗಿ ಹಣ ಡ್ರಾ ಮಾಡಿ ತಂದು ಕೊಡುವ ಮೂಲಕ ಮಾಲೀಕರ ನಂಬಿಕೆ ಗಳಿಸಿಕೊಂಡಿದ್ದ.
ಕಳೆದ ಜೂ.11ರಂದು ಅಣ್ಣನ ಮದುವೆ ಇದೆ ಎಂದು ಹೇಳಿ ಊರಿಗೆ ತೆರಳಿದ್ದು, ಮತ್ತೆ ಕೆಲಸಕ್ಕೆ ಬರಲಿಲ್ಲ. ಈ ನಡುವೆ ವಿಜಯ್ ಪುತ್ರ ಸಂಜಯ್, ಕೊಟಕ್ ಬ್ಯಾಂಕ್ ಸ್ಟೇಟ್ ಮೆಂಟ್ ತರಿಸಿಕೊಂಡು ಪರಿಶೀಲಿಸಿದ್ದಾರೆ. ಚೆಕ್ನಲ್ಲಿ ಸಹಿ ವ್ಯತ್ಯಾಸವಾಗಿದ್ದರಿಂದ ಹಣ ಮರಳಿ ವಿಜಯ್ ಅವರ ಬ್ಯಾಂಕ್ ಖಾತೆಗೆ ಹಣ ಬಂದಿತ್ತು.
ಈ ಬಗ್ಗೆ ಪರಿಶೀಲಿಸಿದಾಗ ಆರೋಪಿ ಖಾಸಿಂ ಸಾಬ್ ಜೂ.11ರಂದು ನಕಲಿ ಸಹಿ ಮಾಡಿ 8 ಲಕ್ಷ ರೂ.ಹಣವನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾನೆ. ಅದೇ ರೀತಿ ವಿವಿಧ ಬ್ಯಾಂಕ್ಗಳಿಂದ ಹಂತ - ಹಂತವಾಗಿ ಒಟ್ಟು 14.90 ಲಕ್ಷ ರೂಪಾಯಿ ಹಣ ಜಮೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ದೂರವಾಣಿ ಕರೆ ಮಾಡಿ ಖಾಸಿಂ ಪ್ರಶ್ನಿಸಿದಾಗ ಹಣ ನೀಡುವುದಾಗಿ ಹೇಳಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ಸಂಜಯ್ ಆರೋಪಿಸಿದ್ದಾರೆ.
ಓದಿ: ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ: ಸರ್ಕಾರದಿಂದ ಪ್ರಮಾಣೀಕೃತ ಹೇಳಿಕೆ ಕೇಳಿದ ಹೈಕೋರ್ಟ್