ಆನೇಕಲ್: ತಮಿಳುನಾಡಿನ ಜನರು ಅಲ್ಲಿಂದ ಅನುಮತಿ ತೆಗೆದುಕೊಂಡು ರಾಜ್ಯಕ್ಕೆ ಎಂಟ್ರಿ ಕೊಡಲು ಬರುತ್ತಿದ್ದರೂ ನಾವು ಅವರನ್ನು ಒಳ ಪ್ರವೇಶ ಮಾಡಿಕೊಳ್ಳಲು ಆಗುವುದಿಲ್ಲ. ಕ್ವಾರಂಟೈನ್ಗೆ ಒಪ್ಪಿದಲ್ಲಿ ಮಾತ್ರ ಅಂತವರನ್ನು 14 ದಿನಗಳ ಕಾಲ ಅವರ ಸ್ವಂತ ಖರ್ಚಿನಲ್ಲಿಯೇ ಖಾಸಗಿ ಹೋಟೆಲ್ನಲ್ಲಿರಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿವಮೂರ್ತಿ ಅತ್ತಿಬೆಲೆ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ದಿನಕ್ಕೆ ಐನೂರರಿಂದ ಆರುನೂರು ಕೊರೊನಾ ಪ್ರಕರಣಗಳು ದಾಖಲಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆಯೇ ಕರ್ನಾಟಕ ಗಡಿಭಾಗ ಅತ್ತಿಬೆಲೆಯಿಂದ ಬೆಂಗಳೂರು ನಗರಕ್ಕೆ ಬರುವ ಎಲ್ಲ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದು, ಇಂದು ನಗರ ಜಿಲ್ಲಾಧಿಕಾರಿ ಅತ್ತಿಬೆಲೆ ಗಡಿಭಾಗಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ತಮಿಳುನಾಡಿನ ಜನರು ಕ್ವಾರಂಟೈನ್ಗೆ ಒಪ್ಪಿದಲ್ಲಿ ಮಾತ್ರ 14 ದಿನಗಳ ಕಾಲ ಅವರ ಸ್ವಂತ ಖರ್ಚಿನಲ್ಲಿಯೇ ಖಾಸಗಿ ಹೋಟೆಲ್ನಲ್ಲಿ ಕ್ವಾರೆಂಟೈನ್ ಮಾಡಲಾಗುವುದು. ಈಗಾಗಲೇ ಕೆಲ ಹೋಟೆಲ್ಗಳನ್ನು ಬುಕ್ ಮಾಡಿದ್ದು, ಅವರು ಅಲ್ಲಿ ಉಳಿದುಕೊಳ್ಳಬಹುದು, ತೀರಾ ಬಡತನ ಅಂದರೆ ಅವರಿಗೆ ಶಾಲೆ ಹಾಸ್ಟೆಲ್ಗಳ ವ್ಯವಸ್ಥೆ ಮಾಡಿ ಅವರಿಗೆ ಸರ್ಕಾರದಿಂದ ಉಚಿತವಾಗಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಇನ್ನು ರಾಜ್ಯಕ್ಕೆ ಗಡಿಭಾಗದ ಪ್ರಮುಖ ಹೆದ್ದಾರಿಗಳನ್ನು ಹೊರತು ಪಡಿಸಿ ಬೇರೆ ಬೇರೆ ಹಳ್ಳಿಗಳಿಂದಲೂ ಸಹ ಒಳ ಬರುತ್ತಿದ್ದಾರೆ ಎನ್ನುವ ಬಗ್ಗೆ ನಮಗೂ ಸಹ ಮಾಹಿತಿ ಬಂದಿದೆ. ಇದೀಗ ಅಲ್ಲಿಯೂ ನಾವು ಪೊಲೀಸರನ್ನು ಇರಿಸಿದ್ದು, ಎಲ್ಲರೂ ಪ್ರಮುಖ ಹೆದ್ದಾರಿಗಳಿಂದಲೇ ಹೋಗಬೇಕಾಗಿದೆ. ಅನ್ಯ ಮಾರ್ಗದಲ್ಲಿ ರಾಜ್ಯ ಪ್ರವೇಶಿಸುವ ಪ್ರಶ್ನೆಯೇ ಇಲ್ಲ ಎಂದರು.