ಬೆಂಗಳೂರು: ರಾಜೀನಾಮೆ ನೀಡಿರುವ ಮೂವರು ಶಾಸಕರನ್ನು ಸ್ಪೀಕರ್ ಅನರ್ಹತೆ ಮಾಡಲಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಗೊತ್ತಾಗಿದ್ದು, ಉಳಿದವರ ರಾಜೀನಾಮೆ ಅಂಗೀಕರಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕಾಂಗ್ರೆಸ್ ಪಕ್ಷದ 13 ಹಾಗೂ ಜೆಡಿಎಸ್ ಮೂವರು ಶಾಸಕರು ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದು, ಪಕ್ಷದ ವಿಪ್ ಉಲ್ಲಂಘನೆ ಹಾಗೂ ಪಕ್ಷಾಂತರ ನಿಷೇಧ ಕಾಯಿದೆ ಅಡಿ ಅನರ್ಹಗೊಳ್ಳುವ ಆತಂಕ ಎದುರಿಸುತ್ತಿದ್ದಾರೆ.
ಆದರೆ, ಇದೀಗ ಇವರಲ್ಲಿ ಮೂವರನ್ನು ಹೊರತುಪಡಿಸಿದರೆ ಉಳಿದವರ ರಾಜೀನಾಮೆ ಅಂಗೀಕಾರವಾಗುವ ಸೂಚನೆ ಕಾಣುತ್ತಿದೆ. ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಬರುವ ಮುನ್ನವೇ ಅಂದರೆ ಇಂದು ಸಂಜೆ ಇಲ್ಲವೇ ನಾಳೆಯೊಳಗೆ ರಾಜೀನಾಮೆ ಅಂಗೀಕರಿಸಿ ಬಿಟ್ಟರೆ ಸಮಸ್ಯೆ ಇರುವುದಿಲ್ಲ. ಇನ್ನುಳಿದ ಶಾಸಕರ ರಾಜೀನಾಮೆ ಅಂಗೀಕರಿಸದಿದ್ದರೆ ಅನಗತ್ಯವಾಗಿ ತಡ ಮಾಡಿದರು ಎಂದು ನಾಳೆ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಬಹುದು. ರಾಜೀನಾಮೆ ಕೊಟ್ಟು 15 ದಿನ ಕಳೆದರೂ ಅಂಗೀಕರಿಸದಿರುವುದೇಕೆ ಎಂದು ಪ್ರಶ್ನೆ ಮಾಡಬಹುದು. ಇದರಿಂದ ಇಂಥದ್ದೊಂದು ಇಕ್ಕಟ್ಟಿಗೆ ತಾವು ಸಿಲುಕಿ ಕೊಳ್ಳಬಾರದು ಎಂದು ಸ್ಪೀಕರ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ವಿವೇಚನೆಯ ಲಾಭ: ಸುಪ್ರೀಂಕೋರ್ಟ್ ಸ್ಪೀಕರ್ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿರುವುದರಿಂದ ಇಂದು ಸಂಜೆ ಇಲ್ಲವೇ ನಾಳೆ ರಾಜೀನಾಮೆ ಅಂಗೀಕಾರ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.
ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಪಕ್ಷೇತರ ಶಾಸಕ ಆರ್. ಶಂಕರ್ ಮೇಲೆ ಅನರ್ಹತೆ ಅಸ್ತ್ರ ಪ್ರಯೋಗ ಮಾಡುವ ಸಾಧ್ಯತೆ ಹೆಚ್ಚಿದೆ. ಪಕ್ಷಾಂತರ ನಿಷೇಧ ಕಾಯಿದೆ ಅಡಿ ಅನರ್ಹ ಅಸ್ತ್ರ ಪ್ರಯೋಗ ಮಾಡಲು ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಇದೆ.
ಹಾದಿ ಸುಲಭ: ಶಾಸಕರ ರಾಜೀನಾಮೆ ಅಂಗೀಕಾರ ಮಾಡಿದ್ರೆ ಯಡಿಯೂರಪ್ಪ ಹಾದಿ ಇನ್ನಷ್ಟು ಸುಲಭವಾಗಲಿದೆ. ಇಂದು ಇಲ್ಲ ನಾಳೆಯೊಳಗೆ ರಾಜೀನಾಮೆ ಅಂಗೀಕಾರವಾದರೆ ಬಿಎಸ್ವೈ ಶುಕ್ರವಾರ ಪ್ರಮಾಣ ವಚನ ತೆಗೆದುಕೊಳ್ಳುವುದು ಖಾತ್ರಿಯಾದಂತೆ ಎಂಬ ಮಾಹಿತಿ ಇದೆ.