ಬೆಂಗಳೂರು : ನಗರದಲ್ಲಿ ಅಪರಾಧ ಪ್ರಕರಣಗಳ ನಿಯಂತ್ರಣಕ್ಕಾಗಿ ಹಾಗೂ ಹೊಯ್ಸಳ ಬೀಟ್ ವ್ಯವಸ್ಥೆ ಗಟ್ಟಿಗೊಳಿಸಲು ನಗರ ಪೊಲೀಸ್ ಆಯುಕ್ತ ದಯಾನಂದ್ ಹೊರಡಿಸಿದ್ದ ಆದೇಶವನ್ನು ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ. ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಹೊಯ್ಸಳ ಸಿಬ್ಬಂದಿಗೆ ಆಯುಕ್ತರು ಸೂಚಿಸಿದ್ದರು. ಇವರ ಸೂಚನೆಗೆ ಮಣೆ ಹಾಕದ 122 ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕಮಾಂಡ್ ಸೆಂಟರ್ನ ಡಿಸಿಪಿಯು ಕಮಿಷನರ್ಗೆ ವರದಿ ನೀಡಿದ್ದಾರೆ.
ಸರಗಳ್ಳತನ, ಕಳವು, ಸಾರ್ವಜನಿಕ ಪ್ರದೇಶಗಳಲ್ಲಿ ದೊಂಬಿ ಸೇರಿದಂತೆ ನಾನಾ ಬಗೆಯ ಅಪರಾಧ ಚಟುವಟಿಕೆಗಳು ನಗರದಲ್ಲಿ ಹೆಚ್ಚಾಗುತ್ತಿವೆ. ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಹಲ್ಲೆ, ಸುಲಿಗೆ, ದರೋಡೆಗಳು ನಡೆಯುತ್ತಿವೆ. ಇದರಿಂದ ಸುಗಮ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುತ್ತಿದೆ. ಸಾರ್ವಜನಿಕರಲ್ಲಿ ಪೊಲೀಸ್ ಬಗ್ಗೆಗಿನ ಒಳ್ಳೆಯ ಅಭಿಪ್ರಾಯ ಮೂಡಿಸಲು ಹಾಗೂ ಅಪರಾಧ ಜರುಗದಂತೆ ಎಚ್ಚರವಹಿಸಲು ಹೊಯ್ಸಳ ಸಿಬ್ಬಂದಿಗಾಗಿ ದಯಾನಂದ ಅವರು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ್ದರು. ನಿತ್ಯ 12 ಗಂಟೆಗಳ ಕರ್ತವ್ಯ ಮಾಡಬೇಕು. ಬಾಡಿವೋರ್ನ್ ಕ್ಯಾಮರಾ ಧರಿಸುವುದು ಸೇರಿದಂತೆ ಇನ್ನಿತರ ಅಂಶನೊಳಗೊಂಡ ಮಾರ್ಗಸೂಚಿಯನ್ನು ಆಯಾ ಠಾಣೆಗಳಿಗೆ ಇಮೇಲ್ ಮುಖಾಂತರ ಸೂಚಿಸಿದ್ದರು.
ಸಮಯಕ್ಕೆ ಸರಿಯಾಗಿ ಬಾರದ ಬೀಟ್ ಸಿಬ್ಬಂದಿ: ಜನಸಂದಣಿವಿರುವ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಡ್ಡಾಯವಾಗಿ 12 ಗಂಟೆ ಡ್ಯೂಟಿಯಂತೆ ಎರಡು ಪಾಳಿಯಲ್ಲಿ ಬೀಟ್ನಲ್ಲಿ ಸುತ್ತಾಡಬೇಕು ಎಂದು ಸೂಚಿಸಿದರೂ ಕೆಲ ಹೊಯ್ಸಳ ಸಿಬ್ಬಂದಿ ರೌಂಡ್ಸ್ ಹೊಡೆಯುತ್ತಿಲ್ಲ. ಅಪರಾಧ ಹೆಚ್ಚಳಕ್ಕೆ ಇದು ಒಂದು ಕಾರಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ ಕಮೀಷನರ್ ಸರಿಯಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಯ ಬಗ್ಗೆ ವರದಿ ಕೇಳಿದ್ದರು. ಇದರಂತೆ ಕಮಾಂಡ್ ಸೆಂಟರ್ನ ಡಿಸಿಪಿಯು ವರದಿ ನೀಡಿದ್ದಾರೆ. ರಿಪೋರ್ಟ್ ನಲ್ಲಿ 122 ಮಂದಿ ಹೊಯ್ಸಳ ಸಿಬ್ಬಂದಿಗಳು ತಡವಾಗಿ ಡ್ಯೂಟಿಗೆ ಹಾಜರಾಗುವ ಮೂಲಕ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ವರ್ತಿಸಿರುವುದಾಗಿ ಉಲ್ಲೇಖಿಸಲಾಗಿದೆ.
ಹೊಯ್ಸಳ ಸಿಬ್ಬಂದಿಗೆ ಇರುವ ಸವಾಲುಗಳೇನು? : ಬೆಳಗ್ಗೆ 8 ಗಂಟೆಯಿಂದ ರಾತ್ರಿ 8ವರೆಗೂ ಹಾಗೂ ರಾತ್ರಿ 8ರಿಂದ ಬೆಳಗ್ಗೆ 8ವರೆಗೂ ಪ್ರತ್ಯೇಕ ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 12 ಗಂಟೆಗಳ ಕರ್ತವ್ಯ ಬೀಟ್ ಸಿಬ್ಬಂದಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಒತ್ತಡದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು 12 ಗಂಟೆಗಳ ಡ್ಯೂಟಿ ಮಾಡುವುದು ಕಷ್ಟಕರವಾಗುತ್ತಿದೆ.
ಸಾರ್ವಜನಿಕರಿಂದ ದೂರುಗಳ ಸಂಖ್ಯೆ ಹೆಚ್ಚಾದಂತೆ ಕೆಲ ಸಂದರ್ಭಗಳಲ್ಲಿ ಪ್ರತಿಯೊಂದು ದೂರುಗಳಿಗೂ ಅಟೆಂಡ್ ಮಾಡಲು ವಿಳಂಬವಾಗುತ್ತಿದೆ. ಅಲ್ಲದೆ ವೈಯಕ್ತಿಕ ಕೆಲಸಗಳಿಗೂ ಸಮಯ ಸಿಗುತ್ತಿಲ್ಲ. ಬಿಪಿ, ಶುಗರ್ ಸೇರಿದಂತೆ ಇನ್ನಿತರ ಖಾಯಿಗಳಿಗೆ ಒಳಗಾಗಿ ಕೆಲಸದ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಹೊಯ್ಸಳ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ಅಕ್ರಮ ಚಟುವಟಿಕೆಗಳಿಗೆ ಏಕಿಲ್ಲ ಕಡಿವಾಣ?: ಪೊಲೀಸ್ ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಕ್ಲಾಸ್