ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸದಾಶಿವನಗರದ ತಮ್ಮ ನಿವಾಸದ ಎದುರು ಮಾಧ್ಯಮದವರೊಂದಿಗೆ ಮತನಾಡಿದ್ದು, ನಿನ್ನೆ ರಾತ್ರಿಯೇ 4 ಲಕ್ಷ ಡೋಸ್ ಲಸಿಕೆ ಬಂದಿದೆ. ಇದರ ಜೊತೆಗೆ ಇನ್ನು 12 ಲಕ್ಷ ಡೋಸ್ ಕೇಂದ್ರದಿಂದ ರಾಜ್ಯಕ್ಕೆ ಶೀಘ್ರದಲ್ಲಿ ಲಸಿಕೆ ಬರಲಿದೆ ಎಂದು ಮಾಹಿತಿ ನೀಡಿದರು.
ಏಪ್ರಿಲ್ 1 ರಿಂದ 45 ವರ್ಷದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ದೇಶದಲ್ಲಿ ಜನೆಟಿಕ್ ಸೀಕ್ವೆನ್ಸಿಂಗ್ ಮಾಡಲಾಗುತ್ತಿದ್ದು, ಡಬಲ್ ಮ್ಯೂಟೆಂಟ್ ವೈರಾಣು ಕಂಡು ಬಂದಿದೆ. 700ಕ್ಕೂ ಹೆಚ್ಚು ಪ್ರಕರಣದಲ್ಲಿ ಈ ರೀತಿಯ ಸೀಕ್ವೆನ್ಸಿಂಗ್ ಕಂಡು ಬಂದಿದ್ದು, ಸ್ಪೈಕ್‌ನಲ್ಲಿ 482 ಪ್ರಕರಣ ಸೇರಿದಂತೆ ಅಮೈನೋ ಆ್ಯಸಿಡ್ನಲ್ಲಿ ಕೋವಿಡ್ ವೈರಾಣು ಕಂಡು ಬಂದಿದೆ ಎಂದು ಹೇಳಿದರು.
ನಿನ್ನೆ ಮಾರ್ಗಸೂಚಿ ಮಾಡಿದ್ದೇವೆ, ಯಾವುದೇ ಕಾರಣಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗಬಾರದು. ಒಂದು ಪಾಸಿಟಿವ್ ಕೇಸ್ ಬಂದರೆ 20 ಜನರ ಸಂಪರ್ಕಿತರನ್ನು ಪತ್ತೆ ಹಚ್ಚಿ ಆರೋಗ್ಯ ಇಲಾಖೆಯಿಂದ ಪರೀಕ್ಷೆ ಮಾಡಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ನಿನ್ನೆ ಕಳೆದ 4 ತಿಂಗಳ ಸರಾಸರಿ ನೋಡಿದರೆ ಬೆಂಗಳೂರಿನಲ್ಲಿ ಕೇಸ್ ಹೆಚ್ಚಾಗಿದ್ದು ಕಂಡು ಬಂದಿದೆ. ಈ ಹಿನ್ನೆಲೆ ಬಿಬಿಎಂಪಿಗೆ ಭೇಟಿ ಕೊಟ್ಟು ಸಿದ್ಧತೆಗಳ ಬಗ್ಗೆ ಪರಾಮರ್ಶೆ ಮಾಡಲು ಹೋಗುತ್ತಿದ್ದೇನೆ ಹಾಗೂ ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಉಪ ಚುನಾವಣೆಗೆ ಬರುತ್ತಾ ಕಠಿಣ ಕೋವಿಡ್ ಕ್ರಮಗಳು
ಉಪ ಚುನಾವಣೆಗೆ ಕೋವಿಡ್ ನಿಯಮಾವಳಿಗಳ ಬಗೆಗಿನ ಪ್ರಶ್ನೆಗಳಿಗೆ ಸಚಿವ ಸುಧಾಕರ್ ಉತ್ತರಿಸುತ್ತಾ, ಉಪ ಚುನಾವಣೆ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಭೇಟಿಗೆ ಸಮಯ ಕೇಳಿದ್ದೇನೆ. ಉಪ ಚುನಾವಣೆಗೆ ಸ್ಪಷ್ಟವಾದ ಮಾರ್ಗಸೂಚಿ ಮಾಡಿಕೊಡಬೇಕು ಎಂದು ಈಗಾಗಲೇ ವಿನಂತಿಸಿದ್ದೇವೆ ಎಂಬ ಬಗ್ಗೆ ಮಾಹಿತಿ ನೀಡಿದರು.
ಚುನಾವಣೆ ಎಂದು ಕೊರೊನ ಬರದೇ ಇರುತ್ತಾ?. ಜನರು ಗುಂಪು ಸೇರುವುದು ಸರಿಯಲ್ಲ. ಈ ವಿಷಯವಾಗಿ ಮಾತನಾಡಲು ರಾಜ್ಯ ಎಲೆಕ್ಷನ್ ಕಮಿಷನರ್ ಭೇಟಿ ಮಾಡುತ್ತೇನೆ. ಸಾವನ್ನು ಕಡಿಮೆ ಮಾಡುವುದು ಮುಖ್ಯ. ಈ ವಿಷಯವಾಗಿ ಜನಸಾಮಾನ್ಯರು ಸಹಕರಿಸಿ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ಪರೀಕ್ಷಿಸಿಕೊಳ್ಳಬೇಕು ಎಂದು ವಿನಂತಿ ಮಾಡಿದರು.