ಬೆಂಗಳೂರು: ದೇಶದಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳ ಬದಲಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಒತ್ತು ನೀಡಲಾಗ್ತಿದೆ. ಆದರೆ ಈಗಾಗಲೇ ಇರುವ ಲಿಥಿಯಂ ಬ್ಯಾಟರಿಗಳು ಕೊನೆಗಾಣುತ್ತಿದ್ದು, ಪ್ರಪಂಚದಲ್ಲಿ ಎಲ್ಲೂ ಸಿಗುತ್ತಿಲ್ಲ. ಹಾಗಾಗಿ ಸೋಡಿಯಂ ಅಥವಾ ಹೈಡ್ರೋಜನ್ ಮುಂತಾದ ಹೊಸ ಬ್ಯಾಟರಿ ಸಂಶೋಧಿಸಿ ವಿಶ್ವಕ್ಕೆ ಭಾರತ ಮಾರಾಟ ಮಾಡಬೇಕಿದೆ ಎಂದು ಭಾರತರತ್ನ ವಿಜ್ಞಾನಿ ಸಿ.ಎನ್.ಆರ್.ರಾವ್ ಆಶಯ ವ್ಯಕ್ತಪಡಿಸಿದರು.
11ನೇ ಬೆಂಗಳೂರು-ಇಂಡಿಯಾ ನ್ಯಾನೋ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾನೋ ವಿಜ್ಞಾನದ ಸಂಶೋಧನೆಗಳ ಮೇಲಿನ ಪೇಪರ್ನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಆದರೆ ತಂತ್ರಜ್ಞಾನದಲ್ಲೂ ದೇಶ ಮುಂದುಬರಬೇಕಿದೆ. ಇಂಧನ, ಪರಿಸರ ಸಂರಕ್ಷಣೆ ವಿಚಾರಗಳಲ್ಲಿ ಹೊಸ ತಂತ್ರಜ್ಞಾನ ಕಂಡುಹಿಡಿಯಬೇಕಿದೆ. ಇದಕ್ಕೆ ಸರ್ಕಾರದಿಂದ ಪ್ರೋತ್ಸಾಹವೂ ಬೇಕಿದೆ ಎಂದು ತಿಳಿಸಿದರು.
ಕೊರಿಯಾ ವಿಜ್ಞಾನ ವಲಯದಲ್ಲಿ ಜಪಾನ್ನನ್ನು ಹಿಂದಟ್ಟುತ್ತಿದೆ. ಚೀನಾ ಸಾಕಷ್ಟು ತಂತ್ರಜ್ಞಾನಗಳಲ್ಲಿ ಮುಂದಿದೆ. ಅಮೆರಿಕದ ವೈದ್ಯಕೀಯ ವಲಯದಲ್ಲಿ ಈಗಾಗಲೇ ನ್ಯಾನೋ ವಿಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಭಾರತದ ಯುವಜನರೂ ಕಷ್ಟಪಟ್ಟು ಸಂಶೋಧನೆಗಳನ್ನು ಮಾಡಬೇಕು. ಶ್ವಾಸಕೋಶ ಕ್ಯಾನ್ಸರ್ ಪತ್ತೆಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಕಡೆಯ ಹಂತದಲ್ಲಿ ಪತ್ತೆಹಚ್ಚಲಾಗುತ್ತಿದೆ. ಮಾಲಿನ್ಯ ತಡೆಗಟ್ಟಲು ಬೇಕಾದ ನ್ಯಾನೋ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ವಿಜ್ಞಾನಿಗಳಿಗೆ ಸಿ.ಎನ್.ಆರ್.ರಾವ್ ಸಲಹೆ ನೀಡಿದರು.
ಡಿಸಿಎಂ ಅಶ್ವಥ್ ನಾರಾಯಣ್ ಮಾತನಾಡಿ, ವಿಜ್ಞಾನ ವಿಭಾಗದ ಯಾವುದೇ ಕೆಲಸಗಳಿಗೆ ಸರ್ಕಾರದ ಸಂಪೂರ್ಣ ಸಹಕಾರ ಇರಲಿದೆ. ಉನ್ನತ ಶಿಕ್ಷಣ, ವೈದ್ಯಕೀಯ ವಿಶ್ವವಿದ್ಯಾಲಯಗಳು, ಪರಿಸರ ಇಲಾಖೆಯ ಜೊತೆಗೂಡಿ ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದರು.
ಮಾರ್ಚ್ನಲ್ಲಿ 2, 3 ಮತ್ತು 4ನೇ ತಾರೀಕಿನಂದು 11ನೇ ಬೆಂಗಳೂರು-ಇಂಡಿಯಾ ನ್ಯಾನೋ ಸಮ್ಮೇಳನ ಲಲಿತ್ ಅಶೋಕ್ ಹೋಟೆಲ್ನಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಇಂಧನದಲ್ಲಿ ನ್ಯಾನೋ ವಿಜ್ಞಾನ , ಶುದ್ಧ ನೀರು ಪರಿಸರದಲ್ಲಿ ನ್ಯಾನೋ ಪಾತ್ರ, ಲ್ಯಾಬ್ನಿಂದ ಮಾರುಕಟ್ಟೆಗೆ ನ್ಯಾನೋ ಸಂಶೋಧನೆಗಳು, ಕೃಷಿಯಲ್ಲಿ ನ್ಯಾನೋ ಪಾತ್ರ, ವೈದ್ಯಕೀಯ ವಲಯದಲ್ಲಿ ನ್ಯಾನೋ ವಿಜ್ಞಾನ , ಉದ್ಯಮಗಳಲ್ಲಿ ನ್ಯಾನೋ ತಂತ್ರಜ್ಞಾನ ವಿಷಯಗಳ ಮೇಲೆ ತಜ್ಞರು ಅನುಭವ ಹಂಚಿಕೊಳ್ಳಲಿದ್ದಾರೆ. ಅಲ್ಲದೆ ಕೆಲವು ಸಂಶೋಧನೆಗಳ ಪ್ರದರ್ಶನವೂ ಇರಲಿದೆ.
ಸುದ್ಧಿಗೋಷ್ಠಿಯಲ್ಲಿ ಐಟಿ-ಬಿಟಿ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ ರಮಣ ರೆಡ್ಡಿ, ವಿಜ್ಞಾನ-ತಂತ್ರಜ್ಞಾನ ಪ್ರೊಮೋಷನ್ ಸೊಸೈಟಿಯ ಎಮ್.ಡಿ. ಹೊನ್ನೇಗೌಡ ಭಾಗಿಯಾಗಿದ್ದರು.