ಬೆಂಗಳೂರು: ವಿಧಾನಸಭೆಯಲ್ಲಿ ಇಂದು 2019-20ನೇ ಸಾಲಿನ 11,803.72 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳ ಮೂರನೇ ಹಾಗೂ ಅಂತಿಮ ಕಂತನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದರು.
ಪೂರಕ ಅಂದಾಜುಗಳ ಬೇಡಿಕೆಗಳಲ್ಲಿ ತೋರಿಸಿರುವ ಉದ್ದೇಶಗಳು ವರ್ಷದಲ್ಲಿ ಅಗತ್ಯವಿರುವ ಅನುದಾನಗಳಿಗೆ ಮತ್ತು ಲೆಕ್ಕ ಹೊಂದಾಣಿಕೆ ವಿಷಯಕ್ಕೆ ಸಂಬಂಧಿಸಿದೆ. ಪೂರಕ ಅಂದಾಜುಗಳಲ್ಲಿ ಒದಗಿಸಿರುವ ಒಟ್ಟು ಮೊತ್ತದಲ್ಲಿ 378.81 ಕೋಟಿ ರೂ. ಪ್ರಾಕೃತ ವೆಚ್ಚ ಮತ್ತು 11,424.91 ಕೋಟಿ ರೂ. ಪರಿಷ್ಕೃತ ವೆಚ್ಚ ಸೇರಿವೆ. ಇದರಲ್ಲಿ 1753.54 ಕೋಟಿ ರೂ. ಸಹ ಪರಿಷ್ಕೃತವಾಗಬೇಕಾಗಿತ್ತು. ರಿಸರ್ವ್ ಫಂಡ್ ಠೇವಣಿಗಳಿಂದ ಇವುಗಳನ್ನ ಭರಿಸಲಾಗುತ್ತದೆ ಎಂದು ಪೂರಕ ಅಂದಾಜಿನಲ್ಲಿ ವಿವರಿಸಲಾಗಿದೆ.
ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ನಿಬಂಧನೆಗಳಿಗೆ ಅನುಗುಣವಾಗಿ ಹಾಗೂ ರಾಜ್ಯ ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಪೂರಕ ಅಂದಾಜುಗಳ ಮೊತ್ತ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.