ಬೆಂಗಳೂರು: ರಾಜ್ಯದಿಂದ ಹೊರ ರಾಜ್ಯಗಳಿಗೆ ಹೋಗಲು ಬಯಸಿ ಸೇವಾ ಸಿಂಧು ವೆಬ್ ಪೋರ್ಟಲ್ನಲ್ಲಿ ಈವರೆಗೆ ಹನ್ನೊಂದು ಲಕ್ಷಕ್ಕೂ ಅಧಿಕ ಜನ ನೋಂದಾಯಿಸಿಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಹೊರ ರಾಜ್ಯಗಳ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಟಿಯು ಸಂಘಟನೆ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಸರ್ಕಾರದ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿ, ರಾಜ್ಯದಿಂದ ಹೊರ ಹೋಗಲು ಬಯಸಿ ಈವರೆಗೂ 11,60,420 ಜನರು ಸೇವಾ ಸಿಂಧು ವೆಬ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಮೇ 3ರಿಂದ 27ರವರೆಗೆ 172 ರೈಲುಗಳ ಮೂಲಕ 2,52,252 ಜನರು ರಾಜ್ಯದಿಂದ ಬೇರೆ ರಾಜ್ಯಗಳಿಗೆ ಪ್ರಯಾಣಿಸಿದ್ದಾರೆ. ಅದೇ ರೀತಿ, ವಿವಿಧ 19 ರಾಜ್ಯಗಳಿಗೆ 933 ಬಸ್ ಗಳ ಮೂಲಕ 25,341 ಜನರನ್ನು ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ಸೇವಾ ಸಿಂಧು ವೆಬ್ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿಕೊಂಡವರಿಗೆ ಪ್ರಯಾಣವನ್ನು ಖಾತರಿಪಡಿಸಲು ಮೊಬೈಲ್ಗಳಿಗೆ ಎಸ್ಎಂಎಸ್ ಕಳಿಸಲಾಗುತ್ತಿದೆ. ಪ್ರಯಾಣ ಖಾತರಿ ಪಡಿಸಿದವರನ್ನು ರಾಜ್ಯದಿಂದ ಹೊರಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಕೀಲರು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೀಠ ಎಸ್ಎಂಎಸ್ ಮೂಲಕ ಮಾಹಿತಿ ನೀಡಿದರೆ ವಲಸೆ ಕಾರ್ಮಿಕರಿಗೆ ತಿಳಿಯುವುದು ಹೇಗೆ. ಮೊದಲು ಹೆಸರು ನೋಂದಾಯಿಸಿ ಕೊಂಡವರಿಗೆ ಮೊದಲ ಆದ್ಯತೆ ನೀಡಬೇಕಲ್ಲವೇ ಎಂದು ಪ್ರಶ್ನಿಸಿತು. ಜತೆಗೆ, ನೋಂದಾಯಿಸಿಕೊಂಡವರಲ್ಲಿ ಈವರೆಗೆ ಎಷ್ಟು ಜನರನ್ನು ಕಳುಹಿಸಿಕೊಡಲಾಗಿದೆ. ಮತ್ತೆ ಎಷ್ಟು ಜನ ಬಾಕಿ ಇದ್ದಾರೆ, ಕಳುಹಿಸಿಕೊಡಲು ಮುಂದೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬುದನ್ನು ಮುಂದಿನ ವಿಚಾರಣೆ ವೇಳೆ ಸ್ಪಷ್ಟಪಡಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.