ಬೆಂಗಳೂರು: ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡು ಮನೆಗಳ್ಳತನ, ಸರಗಳ್ಳತನ ಸೇರಿದಂತೆ 23 ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ 11 ಆರೋಪಿಗಳನ್ನು ಬಂಧಿಸಿದ್ದಾರೆ. ಅಶೋಕನಗರ ಹಾಗೂ ಹಲಸೂರು ಗೇಟ್ ಠಾಣೆಗಳ ತಲಾ 8 ಪ್ರಕರಣ, ವಿವೇಕನಗರ, ಸಂಪಂಗಿ ರಾಮನಗರ, ಎಸ್.ಜೆ. ಪಾರ್ಕ್, ವಿಲ್ಸನ್ ಗಾರ್ಡನ್ ಠಾಣೆಗಳ ತಲಾ ಒಂದೊಂದು ಪ್ರಕರಣ, ಶೇಷಾದ್ರಿಪುರಂ ಠಾಣೆಯ ಮೂರು ಪ್ರಕರಣಗಳಿಗೆ ಸಂಬಂಧಿಸಿದ 4.33 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಕಳ್ಳತನದ ಆರೋಪಿಗಳು ಹಾಗೂ ಅವರು ನೀಡುತ್ತಿದ್ದ ಆಭರಣಗಳನ್ನು ಸ್ವೀಕರಿಸುತ್ತಿದ್ದವರ ಸಹಿತ 23 ಜನರನ್ನ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಹೆಚ್. ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಜಾನ್ ಶಂಕರ್ ಎಂಬಾತನನ್ನ ಬಂಧಿಸಿ 223 ಗ್ರಾಂ ಚಿನ್ನಾಭರಣ, 232.44 ಬೆಳ್ಳಿ ಆಭರಣ ಹಾಗೂ 10 ಸಾವಿರ ರೂ ಮೌಲ್ಯದ ಹವಳ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ. ವಿವೇಕನಗರ ವ್ಯಾಪ್ತಿಯಲ್ಲಿ ಶ್ರೀನಿವಾಸ್, ಹಾಗೂ ಕದ್ದ ಆಭರಣ ಸ್ವೀಕರಿಸುತ್ತಿದ್ದ ಭವರ್ ಲಾಲ್ ಎಂಬುವರನ್ನು ಬಂಧಿಸಿ 301 ಗ್ರಾಂ ಚಿನ್ನಾಭರಣ, 378 ಗ್ರಾಂ ತೂಕದ ಬೆಳ್ಳಿ ಸಾಮಗ್ರಿಗಳು, ಅಡವಿಡಲಾಗಿದ್ದ 60.4 ಗ್ರಾಂ ಚಿನ್ನ ಮತ್ತು 378 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಲಸೂರು ಗೇಟ್ ವ್ಯಾಪ್ತಿಯಲ್ಲಿ ಯಾಸೀನ್ ಖಾನ್ ಹಾಗೂ ನೂರುಲ್ಲಾ ಮುಲ್ಲಾ, ಅಹಮ್ಮದ್ ಸಲ್ಮಾನ್ ಎಂಬುವರನ್ನು ಬಂಧಿಸಿ 1 ಕೆ.ಜಿ 522 ಗ್ರಾಂ ಚಿನ್ನದ ಒಡವೆ ಮತ್ತು ಚಿನ್ನದ ಗಟ್ಟಿ, ನಾಲ್ಕು ವಾಚ್‌ಗಳು, 100 ಗ್ರಾಂ ಬೆಳ್ಳಿ ಆಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ. ಎಸ್.ಜೆ. ಪಾರ್ಕ್ ವ್ಯಾಪ್ತಿಯ ನಿಕುಂಜ್ ಕುಮಾರ್ ಬಾಸ್ಟಲ್ ಎಂಬಾತನನ್ನು ಬಂಧಿಸಿ 6 ಕೆ.ಜಿ. 500 ಗ್ರಾಂ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನವನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಂಪಂಗಿ ರಾಮನಗರ ವ್ಯಾಪ್ತಿಯಲ್ಲಿ ಕಂಬರ್ ಶಬ್ಬೀರ್ ಇರಾನಿ ಎಂಬಾತನನ್ನ ಬಂಧಿಸಿ 2 ಲಕ್ಷ 50 ಸಾವಿರ ರೂ ಬೆಲೆಬಾಳುವ ಚಿನ್ನದ ಬ್ರಾಸ್‌ಲೆಟ್, ಚಿನ್ನದ ಚೈನು, ಬೆಳ್ಳಿ ಉಂಗುರ, ವಾಚು ಮತ್ತು ಪರ್ಸ್ ವಶಪಡಿಸಿಕೊಳ್ಳಲಾಗಿದೆ. ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕೊರಳನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿ ಮಾರಾಟ ಮಾಡಿದ್ದ ಸೈಯದ್ ಸಬೀರ್, ಅರ್ಮಾನ್ ಎಂಬಾತನನ್ನ ಬಂಧಿಸಿ 1,90,000 ರೂ ಬೆಲೆ ಬಾಳುವ 36 ಗ್ರಾಂ ತೂಕದ ಚಿನ್ನದ ಸರ ಕೃತ್ಯಕ್ಕೆ ಉಪಯೋಗಿಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ ಸಿಗರೇಟ್ ಸೇದುತ್ತಾ ಬರುತ್ತಿದ್ದ ವ್ಯಕ್ತಿಯನ್ನು ತಡೆದು ಸಿಗರೇಟಿನ ಕಿಡಿ ತನ್ನ ಕಣ್ಣಿಗೆ ತಾಗಿತೆಂದು ಗಲಾಟೆ ಮಾಡಿ, ನಂತರ ಆತ್ಮೀಯತೆಯಿಂದ ಮಾತನಾಡುತ್ತ ಚಿನ್ನದ ಸರವನ್ನು ನೋಡುತ್ತೇನೆಂದು ನಂಬಿಸಿ 20 ಗ್ರಾಂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದ ಆರೋಪಿಯ ರೂಪೇಶ್ ಸಿಂಗ್ ಎಂಬುವನನ್ನ ಬಂಧಿಸಿ 3 ಲಕ್ಷ ರೂ ಬೆಲೆ ಬಾಳುವ 70 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಮನೆಗಳ್ಳತನ ಮಾಡಿ ಯಶವಂತಪುರದ ಮಟ್ಟಂ ಫೈನಾನ್ಸ್ ನಲ್ಲಿ ಚಿನ್ನಾಭರಣ ಅಡವಿಟ್ಟಿದ್ದ ಪ್ರಶಾಂತ್ ಪಟ್ಟೆ ಎಂಬಾತನನ್ನ ಬಂಧಿಸಿ 2.5 ಲಕ್ಷ ಮೌಲ್ಯದ 72 ಗ್ರಾಂ. ತೂಕದ ಚಿನ್ನದ ಆಭರಣ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರತಾಪ್ ರೆಡ್ಡಿ ಮಾಹಿತಿ ನೀಡಿದರು.