ಬೆಂಗಳೂರು: ನಗರದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಒಡಿಶಾ ರಾಜ್ಯದ ಜೈವಿಕ ತಂತ್ರಜ್ಞಾನ ಮಳಿಗೆ ಕೂಡ ಗಮನ ಸೆಳೆಯುವ ಕಾರ್ಯ ಮಾಡುತ್ತಿದೆ.
ಒಡಿಶಾ ರಾಜ್ಯ ಸರ್ಕಾರದ ಭಾಗವಾಗಿರುವ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಆಗಿರುವ ಹೊಸ ಆವಿಷ್ಕಾರಗಳು, ತಂತ್ರಜ್ಞಾನದ ಬಳಕೆ ಇತ್ಯಾದಿ ಸಮಗ್ರ ವಿವರ ಇಲ್ಲಿ ಲಭ್ಯವಿದೆ. ಒಡಿಶಾ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಭಾಗವಾಗಿರುವ 5 ಇಲಾಖೆಗಳು ಈ ಮಳಿಗೆಯಲ್ಲಿ ಮಾಹಿತಿ ಒದಗಿಸುತ್ತಿವೆ. ಅಲ್ಲಿನ ಸರ್ಕಾರದ ಅತ್ಯಂತ ಪ್ರಮುಖ ಇಲಾಖೆಗಳು ಇವಾಗಿದ್ದು ಇವುಗಳಲ್ಲಿ ಸಾಧಿಸಿರುವ ಸಾಧನೆಗಳ ವಿವರ ಇಲ್ಲಿದೆ.
ಒಡಿಶಾ ರಾಜ್ಯ ಸರ್ಕಾರ ಗ್ರಾಮೀಣ ಭಾಗದಲ್ಲಿ ನವೀಕರಿಸಬಹುದಾದ ಇಂಧನಗಳ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಮಟ್ಟದ ಪ್ರಗತಿ ಸಾಧಿಸಿದ್ದು, ಇದರ ಜೊತೆಜೊತೆಗೆ ಸೌರಶಕ್ತಿ ಉತ್ಪಾದನೆಯಲ್ಲೂ ಉತ್ತಮ ಪ್ರಗತಿ ಕಂಡು ಕೊಂಡಿದೆ. ಒರ್ಸ್ಯಾಕ್ ಹೆಸರಿನ ವಿಶಿಷ್ಟ ಅಪ್ಲಿಕೇಶನ್ ಮೂಲಕ ಏಕಗವಾಕ್ಷಿ ಪದ್ಧತಿ ಜಾರಿಗೆ ತರಲಾಗಿದೆ. ಹಲವು ಇಲಾಖೆಯ ಕೆಲಸ ಕಾರ್ಯಗಳು ಇದರ ಮೂಲಕ ನೆರವೇರುತ್ತದೆ. ಕಳೆದ ವರ್ಷ ನಡೆದ ರಾಷ್ಟ್ರೀಯ ಕಾಂಗ್ರೆಸ್ ಉತ್ಸವದಲ್ಲಿ ನಾವು ಉತ್ತಮ ಕಾರ್ಯ ನಿರ್ವಹಣೆಯ ಪ್ರಶಸ್ತಿ ಕೂಡ ಪಡೆದಿದ್ದೇವೆ. ನಮ್ಮ ಕಾರ್ಯನಿರ್ವಹಣೆಯ ಸಂದೇಶವನ್ನು ಜನರಿಗೆ ಸಾರಲು ಮಳಿಗೆಯನ್ನು ಇಲ್ಲಿ ತೆರೆದಿದ್ದೇವೆ ಎಂದು ವಿಜ್ಞಾನಿ ಪ್ರಶಾಂತ್ ಕುಮಾರ್ ಸಡಂಗಿ ತಿಳಿಸಿದರು.