ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಚಿತ್ರಮಂದಿರಗಳಲ್ಲಿ ಪೂರ್ಣಪ್ರಮಾಣದ ಪ್ರವೇಶಕ್ಕೆ ಒಪ್ಪಿಗೆ ಸೂಚಿಸಿದೆ.
ಇಂದು ನಡೆದ ಸಭೆಯಲ್ಲಿ ಚಿತ್ರರಂಗದ ಗಣ್ಯರ ಜೊತೆ ಚರ್ಚೆ ನಡೆಸಿದ ಆರೋಗ್ಯ ಸಚಿವ ಡಾ.ಸುಧಾಕರ್, ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ಒಪ್ಪಿಗೆ ನೀಡಿದ್ದಾರೆ. ಸಭೆಯಲ್ಲಿ ನಟ ಶಿವರಾಜ್ ಕುಮಾರ್, ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ನಿರ್ಮಾಪಕರ ಸಂಘ ಅಧ್ಯಕ್ಷ ಪ್ರವೀಣ್ ರಾಮಕೃಷ್ಣ, ಥಿಯೇಟರ್ ಮಾಲೀಕರ ಸಂಘದ ಅಧ್ಯಕ್ಷ ಕೆ.ವಿ ಚಂದ್ರಶೇಖರ್, ನಟಿ ತಾರಾ ಅನುರಾಧ, ಸಾ.ರಾ ಗೋವಿಂದ್, ಉಮೇಶ್ ಬಣಕಾರ್, ನಿರ್ದೇಶಕ ಪವನ್ ಒಡೆಯರ್ ಒಳಗೊಂಡ ನಿಯೋಗ ಸಚಿವರಾದ ಸುಧಾಕರ್, ಸಿ.ಸಿ ಪಾಟೀಲ್ ಜೊತೆ ಸಭೆ ನಡೆಸಿತು. ಸಭೆಯಲ್ಲಿ ವಿಶ್ವ ಆರೋಗ್ಯ ಸದಸ್ಯರು ಸಹ ಭಾಗಿಯಾಗಿದ್ದರು.
ಸ್ಯಾಂಡಲ್ವುಡ್ ನಂಬಿ ಸಾವಿರಾರು ಕುಟುಂಬಗಳು ಬದುಕುತ್ತಿವೆ. ಚಿತ್ರರಂಗದ ಬೇಡಿಕೆ ಮೇರೆಗೆ ಮುಖ್ಯಮಂತ್ರಿ ಸೂಚನೆ ಅನುಸರಿಸಿ, ಎಲ್ಲ ಚಿತ್ರಮಂದಿರಗಳಲ್ಲಿ ನಾಲ್ಕು ವಾರಗಳ ಕಾಲ ಥಿಯೇಟರ್ ಫುಲ್ ಹೌಸ್ಗೆ ಅವಕಾಶ ನೀಡಲಾಗಿದೆ ಎಂದರು.
ಸೂಕ್ತ ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಾರ್ಗಸೂಚಿಯೊಂದಿಗೆ ನಾಳೆ ಆದೇಶ ಹೊರಡಿಸುತ್ತೇವೆ. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರು ಥಿಯೇಟರ್ ಮಾಲೀಕರಿಗೆ ಸಹಕರಿಸಬೇಕು. ಅಲ್ಲದೆ ಕೊರೊನಾ ನಿಯಮಾವಳಿಗೆಳನ್ನು ಅನುಸರಿಸಬೇಕು ಎಂದರು.
ನಂತರ ಮಾತನಾಡಿದ ಸಚಿವ ಸಿ ಸಿ ಪಾಟೀಲ್, ನಾಳೆ ಸಂಜೆಯೊಳಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟಿಸುತ್ತೇವೆ. ಶುಕ್ರವಾರದಿಂದ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡುತ್ತಿದ್ದೇವೆ, ಕೊರೊನಾದಿಂದ ಬಸವಳಿದಿರುವ ಚಿತ್ರೋದ್ಯಮ ಚೇತರಿಕೆ ಕಾಣಲಿ ಎಂದು ಚಿತ್ರೋದ್ಯಮಕ್ಕೆ ಶುಭ ಹಾರೈಸಿದರು. ನಾವು ಸಹ ಒಂದು ವರ್ಷದಿಂದ ಚಿತ್ರಮಂದಿರಕ್ಕೆ ಕಾಲಿಟ್ಟಿಲ್ಲ. ಆದಷ್ಟು ಬೇಗ ಶಿವರಾಜ್ ಕುಮಾರ್ ಚಿತ್ರ ಬರಲಿ. ನಾವು ಚಿತ್ರ ಮಂದಿರಕ್ಕೆ ಹೋಗಿ ಚಿತ್ರ ವೀಕ್ಷಣೆ ಮಾಡುತ್ತೇವೆ ಎಂದರು.
ನಟ ಶಿವರಾಜ್ ಕುಮಾರ್ ಮಾತನಾಡಿ, ಸಭೆಯ ಆರಂಭದಲ್ಲಿ ನಾವು ಸಹ ಮಾತುಕತೆ ನಡೆಸಿದ್ದೆವು. ಆರಂಭದಲ್ಲಿ ನಾವು ಸಹ ನಮ್ಮ ವಾದ ಮಾಡಿದ್ದೆವು. ಅವರು ಸಹ ಅವರ ವಾದ ಮಂಡಿಸಿದ್ರು. ನಂತರ ಯಾಕೆ ಶೇ.50ರಷ್ಟು ಕೊಟ್ಟಿದ್ದೆವು ಅಂತಾ ಹೇಳಿದರು, ನಂತರ ನಾವು ಶೇ.100ರಷ್ಟು ಯಾಕೆ ಅಂತಾ ಹೇಳಿದೆವು. ಕೊನೆಗೆ ಶೇ.100ರ ಆಸನ ಭರ್ತಿಗೆ ಒಪ್ಪಿಗೆ ನೀಡಿದ್ದಾರೆ. ಮುಂದಿನ ದಿನದಲ್ಲಿ ಯಾವುದೇ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ, ಪ್ರೇಕ್ಷಕರು ಸಹಕಾರ ನೀಡಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.