ಬೆಂಗಳೂರು: ಲಾಕ್ ಡೌನ್ ಎಫೆಕ್ಟ್ ಪರಿಣಾಮ ಬದುಕು ಕಳೆದುಕೊಂಡಿರುವ ದಿನಗೂಲಿ ಹಾಗೂ ವಲಸೆ ಕಾರ್ಮಿಕರಿಗೆ ಹೊಟ್ಟೆ ತುಂಬಿಸಲು ಮಲ್ಲೇಶ್ಚರದಲ್ಲಿರುವ ಶ್ರೀಕಾಶಿ ಮಠ ದಿನಕ್ಕೆ ಸಾವಿರಾರು ಜನರಿಗೆ ಗುಣಮಟ್ಟದ ಆಹಾರ ಸಿದ್ದಪಡಿಸಿ ವಿತರಣೆ ಮಾಡುತ್ತಿದೆ.
ಪಾರ್ಥಸಾರಥಿ ಚಾರಿಟಬಲ್ ಟ್ರಸ್ಟ್ ಹೆಸರಿನಲ್ಲಿ ಮಠದಲ್ಲಿಯೇ ಆಹಾರ ತಯಾರಿಸಿ ನಿತ್ಯ 10 ಸಾವಿರ ಆಹಾರ ಪೊಟ್ಟಣಗಳನ್ನು ನಗರದೆಲ್ಲೆಡೆ ವಿತರಿಸಲಾಗುತ್ತಿದೆ. ಟ್ರಸ್ಟ್ನಲ್ಲಿ ವೈದ್ಯರು, ಸಾಫ್ಟ್ ವೇರ್ ಇಂಜಿನಿಯರ್ಸ್, ಉದ್ಯಮಿಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಒಂದೆಡೆ ಸೇರಿ ಲಾಕ್ ಡೌನ್ ವೇಳೆ, ಸಂಕಷ್ಟದಲ್ಲಿರುವ ಬಡವರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಕೈಜೋಡಿಸಿರುವುದು ಶಾಘ್ಲನೀಯ.
ಕಳೆದ ಮಾ.27ರಿಂದ ದಿನಕ್ಕೆ 300 ಜನಕ್ಕೆ ಆರಂಭವಾಗಿ ಇದೀಗ 10 ಸಾವಿರಕ್ಕೆ ತಲುಪಿದೆ. ಇದಕ್ಕೆ ಕಾರಣ ಸಾರ್ವಜನಿಕರು ಸೇರಿದಂತೆ ಟ್ರಸ್ಟ್ ಸದಸ್ಯರು ಉದಾರ ಮನಸ್ಸಿನಿಂದ ಮಾಡಿದ ದೇಣಿಗೆಯಿಂದ ದಿನನಿತ್ಯ ಸಾವಿರಾರು ಜನರಿಗೆ ಆಹಾರ ನೀಡಲು ಸಾಧ್ಯವಾಗುತ್ತಿದೆ ಎಂದು ಟ್ರಸ್ಟ್ ಸದಸ್ಯ ಗುರುದತ್ ಪ್ರಭು ತಿಳಿಸಿದರು. ಅಲ್ಲದೇ ನಿತ್ಯ ಪಲಾವ್, ಟೊಮೇಟೊ ಬಾತ್, ಪುದೀನಾ ಬಾತ್, ಚಿತ್ರಾನ್ನ ಹೀಗೆ ದಿನಕ್ಕೆ ಎರಡು ಬಾರಿ ಆಹಾರ ಸಿದ್ದಪಡಿಸಿ ಪೊಟ್ಟಣ ಕಟ್ಟಿ ವಿತರಿಸುತ್ತೇವೆ ಎಂದರು.