ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ ಬೈಕ್ ಸವಾರನೊಬ್ಬ ಬರೋಬ್ಬರಿ 10 ಸಾವಿರ ರೂ. ದಂಡ ಕಟ್ಟಿದ್ದಾನೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ ಬೈಕ್ ಸವಾರನಿಂದ ಹಳೆಯ ಎಲ್ಲಾ104 ಕೇಸ್ಗಳಿಂದ ಒಟ್ಟು 10 ಸಾವಿರ ರೂ. ದಂಡವನ್ನು ಜಾಲಹಳ್ಳಿ ಸಂಚಾರ ಪೊಲೀಸರು ವಸೂಲಿ ಮಾಡಿದ್ದಾರೆ.
ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಹಮ್ಮದ್ ಶಬ್ಬೀರ್ ಎಂಬ ವ್ಯಕ್ತಿ ಬೈಕ್ ಸವಾರಿ ಮಾಡುತ್ತಿರುವಾಗ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಈ ವೇಳೆ ಪೊಲೀಸರು ಬೈಕ್ ರಿಜಿಸ್ಟಾರ್ ನಂಬರ್ ಪರಿಶೀಲಿಸಿದಾಗ ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್, ಮೊಬೈಲ್ ಬಳಕೆ ಸೇರಿದಂತೆ ಬರೋಬ್ಬರಿ 104 ಪ್ರಕರಣಗಳು ಆ ನಂಬರ್ನಲ್ಲಿ ದಾಖಲಾಗಿದ್ದವು. ಇದನ್ನು ನೋಡಿ ಶಾಕ್ ಆದ ಪೊಲೀಸರು, ದಂಡದ ಪ್ರಕರಣಗಳ ಒಟ್ಟು ಮೊತ್ತವನ್ನು ಒಗ್ಗೂಡಿಸಿ ಶಬ್ಬೀರ್ನಿಂದ 10 ಸಾವಿರ ದಂಡವನ್ನು ಸಂಗ್ರಹಿಸಿದ್ದಾರೆ.
ಇನ್ನು ಈ ಮೂಲಕ ತನ್ನೆಲ್ಲಾ ಕೇಸ್ಗಳ ದಂಡವನ್ನು ಕಟ್ಟಿ ವಾಹನ ಸವಾರ ಮುಕ್ತಿ ಹೊಂದಿದ್ದು, ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿಕೊಂಡಿದ್ದಾನೆ.