ಬೆಂಗಳೂರು: ವಿಕಾಸಸೌಧಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಬ್ಯಾಗ್ನಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಣ ಹಾಗೂ ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಜಗದೀಶ್ನನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಸಂಜೆ ವಿಕಾಸಸೌಧ ವೆಸ್ಟ್ ಗೇಟ್ ಬಳಿ ಬಂದಿದ್ದ ಜಗದೀಶ್ ನನ್ನ ಭದ್ರತಾ ತಪಾಸಣೆಗೆ ಒಳಪಡಿಸಿದಾಗ, ಅವರು ತಂದಿದ್ದ ಬ್ಯಾಗ್ನಲ್ಲಿ 10 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಈ ಬಗ್ಗೆ ಜಗದೀಶ್ ಅವರು ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಮತ್ತು ಸೂಕ್ತ ದಾಖಲಾತಿ ಇಲ್ಲದ್ದರಿಂದ ಭದ್ರತಾ ಸಿಬ್ಬಂದಿಯು ವಿಧಾನಸೌಧ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಣದ ಬ್ಯಾಗ್ ಜೊತೆ ಜಗದೀಶ್ ಅವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
’’ಭದ್ರತಾ ಸಿಬ್ಬಂದಿಯ ಮಾಹಿತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ವಿಚಾರಣೆಯಲ್ಲಿ ಜಗದೀಶ್ ಅವರು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಹಣ ತಂದಿದ್ದು, ಸೂಕ್ತ ದಾಖಲಾತಿ ನೀಡಲು ಸಮಯಾವಕಾಶ ಕೊಡುವಂತೆ ಕೇಳಿಕೊಂಡಿದ್ದಾರೆ‘‘ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಹಣವನ್ನು ಕೋರ್ಟ್ ವಶಕ್ಕೆ ನೀಡಿದ್ದೇವೆ. ಸೂಕ್ತ ದಾಖಲಾತಿ ತಂದು ಕೋರ್ಟ್ನಲ್ಲೇ ಹಣ ಪಡೆದುಕೊಳ್ಳುವಂತೆ ತಿಳಿಸಿದ್ದೇವೆ. ನೋಟಿಸ್ ನೀಡಿ ಇಂದು ಕೂಡ ವಿಚಾರಣೆಗೆ ಕರೆದಿದ್ದೇವೆ. ವಿಚಾರಣೆ ಬಳಿಕವಷ್ಟೇ ಇನ್ನುಳಿದ ಮಾಹಿತಿ ತಿಳಿದು ಬರಲಿದೆ ಎಂದು ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.
(ಓದಿ: ಸವದತ್ತಿ ಅಪಘಾತ ಸಂತ್ರಸ್ತರಿಗೆ ₹5 ಲಕ್ಷ ಪರಿಹಾರ; ಆ್ಯಸಿಡ್ ದಾಳಿಗೊಳಗಾದ ಪ್ರೇಮಾಗೆ ಉದ್ಯೋಗ ಭರವಸೆ )