ನೆಲಮಂಗಲ (ಬೆಂಗಳೂರು ಗ್ರಾಮಾಂತರ) : ತಾಲೂಕಿನ ದಾಬಸ್ಪೇಟೆ ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟಗೊಂಡು ಓರ್ವ ಕಾರ್ಮಿಕ ಮೃತಪಟ್ಟ ಘಟನೆ ಇಂದು ಸಂಭವಿಸಿದೆ. ಘಟನೆಯಲ್ಲಿ ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ಖಾಸಗಿ ಕಂಪನಿಯಲ್ಲಿ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬಾಯ್ಲರ್ ಸ್ಫೋಟಗೊಂಡು ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ತೀವ್ರ ಗಾಯಗೊಂಡ ಕಾರ್ಮಿಕ ಚಿಗಮಲ್ಲಪ್ಪ ಅಲಿಯಾಸ್ ಮಂಜಪ್ಪ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಕಾರ್ಮಿಕ ಮನೋಜ್ಗೆ (29) ಗಂಭೀರ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತಪಟ್ಟ ಚಿಗಮಲ್ಲಪ್ಪ ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮದ ಗ್ರಾಮದವನಾಗಿದ್ದು, ಟಿ. ದಾಸರಹಳ್ಳಿಯಲ್ಲಿ ವಾಸವಿದ್ದ. ಗಾಯಾಳು ಮನೋಜ್ ತುಮಕೂರು ಜಿಲ್ಲೆಯ ಬೆಳ್ಳಾವಿ ಸಮೀಪದ ಬಳ್ಳಾಪುರದವರು ಎಂದು ತಿಳಿದುಬಂದಿದೆ.
ಬಾಯ್ಲರ್ ರಿಪೇರಿ ಇದ್ದ ಕಾರಣ ಕಂಪನಿಯ ಒಳಗಿನಿಂದ ಹೊರಗಡೆ ತಂದಾಗ ಸ್ಫೋಟ ಉಂಟಾಗಿದೆ. ಘಟನೆ ವೇಳೆ ಬಾಯ್ಲರ್ನ ಕಬ್ಬಿಣದ ತುಂಡುಗಳು, ಬೋಲ್ಟ್ಗಳು ಸುಮಾರು ದೂರದವರೆಗೆ ಹಾರಿವೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಜಗದೀಶ್, ಆರಕ್ಷಕ ನಿರೀಕ್ಷಕ ರವಿ.ಎಸ್. ಪಿಎಸ್ಐ ವಿಜಯಕುಮಾರಿ, ಎಎಸ್ಐ ವೀರಭದ್ರಯ್ಯ, ಮಲ್ಲೇಶ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.