ದೊಡ್ಡಬಳ್ಳಾಪುರ: ಮಾರಣಾಂತಿಕ ಕೊರೊನಾ ದೇಶದಲ್ಲಿ ಎಷ್ಟೋ ಜನರ ಉದ್ಯೋಗಾವಕಾಶಗಳನ್ನು ಕಸಿದುಕೊಂಡಿದೆ. ಇಂತಹ ಸಂದರ್ಭದಲ್ಲಿ ಗಾರ್ಮೆಂಟ್ಸ್ ಮಹಿಳೆಯರ ಕೈ ಹಿಡಿದದ್ದು ಮಾಸ್ಕ್ ತಯಾರಿಕೆ ಕೆಲಸ. ಕೊರೊನಾ ಸಮಯದಲ್ಲಿ ಕೆಲಸವಿಲ್ಲದೆ ಖಾಲಿ ಕುಳಿತಿದ್ದ ಮಹಿಳೆಯರಿಗೆ ಕೃಷಿ ಇಲಾಖೆ ನೆರವು ನೀಡಿದೆ.
ಬೆಂಗಳೂರು ಗ್ರಾಮಾಂತರ ಕೃಷಿ ಇಲಾಖೆಯ ಜಲಾನಯನ ಯೋಜನೆಯಡಿ (ಪಿಎಂಕೆಎಸ್ ವೈ-ಡಬ್ಲ್ಯು ಡಿ ) ಮಹಿಳೆಯರು ಮಾಸ್ಕ್ ತೈಯಾರಿಕೆ ಮಾಡುತ್ತಿದ್ದಾರೆ. ತಾಲೂಕಿನ ಕಸಘಟ್ಟ ಹಾಗೂ ಅಕ್ಕ ಪಕ್ಕದ ಅಂಬಲಗೆರೆ, ತರಬನಹಳ್ಳಿಯ ಸ್ವಸಹಾಯ ಸಂಘದ ಮಹಿಳೆಯರಿಂದ ಸಾವಿರಾರು ಮಾಸ್ಕ್ಗಳನ್ನು ತಯಾರಿಸುತ್ತಿದ್ದಾರೆ. ಒಂದು ಮಾಸ್ಕ್ಗೆ 10ರೂ. ಖರ್ಚು ಬರುತ್ತಿದ್ದು, ಅದನ್ನು 15 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್ಗಳ ಕೊರತೆಯಿದ್ದು, ಹಲವು ಸಂಘ ಸಂಸ್ಥೆಗಳಿಂದ ಹೆಚ್ಚು ಬೇಡಿಕೆ ಬರುತ್ತಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಉಪ ಕೃಷಿ ನಿದೇರ್ಶಕರಾದ ವಿನುತ ಮಾತನಾಡಿ, ಹತ್ತು ಸ್ವ ಸಹಾಯ ಗುಂಪುಗಳು ಸೇರಿ, ಈ ಮಹಾಮಾರಿ ಕೊರೊನಾ ರೋಗದ ಸಂದರ್ಭದಲ್ಲಿ ಸಾಮಾಜಿಕ ಸೇವೆ ಜೊತೆಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಈ ಮಾಸ್ಕ್ ತಯಾರಿಕೆ ಸಹಕಾರಿಯಾಗಿದೆ. ಎಲ್ಲೆಡೆ ಮಾಸ್ಕ್ಗಳಿಗೆ ಉತ್ತಮ ಬೇಡಿಕೆಯಿದೆ. ಸುತ್ತಮುತ್ತಲಿನ ಗ್ರಾಮದ 20 ಮಹಿಳೆಯರು ಮಾಸ್ಕ್ಗಳನ್ನು ತಯಾರಿಸುತ್ತಿದ್ದಾರೆ. ಸುಮಾರು 10 ರಿಂದ 12 ಸಾವಿರ ಮಾಸ್ಕ್ಗಳಿಗೆ ಬೇಡಿಕೆಯಿದೆ ಎಂದು ತಿಳಿಸಿದರು.