ದೊಡ್ಡಬಳ್ಳಾಪುರ : ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವದಿಂದ ಬಾಣಂತಿ ಸಾವನ್ನಪ್ಪಿದ್ದು, ಹುಟ್ಟುತ್ತಲೇ ತನ್ನ ತಾಯಿಯನ್ನು ಕಳೆದುಕೊಂಡ ಮಗು ಅನಾಥವಾಗಿದೆ.
ದೊಡ್ಡಬಳ್ಳಾಪುರ ನಗರದ ತಾಯಿ-ಮಗು ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಮಮತಾ (26) ಸಾವನ್ನಪ್ಪಿದ್ದಾರೆ. ಸಹಜ ಹೆರಿಗೆಯಾಗದೇ ವೈದ್ಯರು ಸಿಜೇರಿಯನ್ ಮಾಡಿಸಿದ್ದರು. ಈ ವೇಳೆ ಆಧಿಕ ರಕ್ತಸ್ರಾವದಿಂದ ಬಾಣಂತಿಯ ಆರೋಗ್ಯದಲ್ಲಿ ಏರುಪೇರಾದಾಗ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ಕಳಿಸಲಾಗಿತ್ತು. ಅಲ್ಲಿ ಗರ್ಭ ಕೋಶವನ್ನ ತೆಗೆಯಲಾಗಿದ್ಧು, ಚಿಕಿತ್ಸೆ ಫಲಕಾರಿಯಾಗದೆ ಬಾಣಂತಿ ಸಾವನ್ನಪ್ಪಿದ್ದಾಳೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಮೃತಳ ಸಂಬಂಧಿಕರು ಆರೋಪಿಸಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ಅಕ್ರೋಶ ವ್ಯಕ್ತಪಡಿಸಿದರು.
ಮಮತಾ ಮೃತ ಬಾಣಂತಿ. ಈಕೆ ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಯಾಗಿದ್ದು, ತುಮಕೂರಿನ ಹಿರೇಹಳ್ಳಿಯ ಸಂತೋಷ್ ಜೊತೆ ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿತ್ತು. ಗರ್ಭಿಣಿಯಾಗಿದ್ದ ಮಮತಾ ತವರು ಮನೆಯಾದ ದೊಡ್ಡಬಳ್ಳಾಪುರಕ್ಕೆ ಬಂದಿದ್ದರು. ದೊಡ್ಡಬಳ್ಳಾಪುರದ ತಾಯಿ-ಮಗು ಆಸ್ಪತ್ರೆಯಲ್ಲಿ ವೈದಕೀಯ ತಪಾಸಣೆ ಮಾಡಿಸುತ್ತಿದ್ದರು.
ಎಪ್ರಿಲ್ 7ರಂದು ಹೆರಿಗೆ ಮಾಡಿಸುವುದಾಗಿ ವೈದ್ಯರು ಹೇಳಿದ ಹಿನ್ನೆಲೆ ಮಮತಾಳನ್ನ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಮನೆಯಿಂದ ಬರುವಾಗ ಆರೋಗ್ಯವಾಗಿಯೇ ಇದ್ದ ಮಮತಾಗೆ, ಆಸ್ಪತ್ರೆಗೆ ಬಂದಾಗ ಹೆರಿಗೆ ನೋವು ಕಾಣಿಸದಿದ್ದಕ್ಕೆ ವೈದ್ಯರು ಇಂಜೆಕ್ಷನ್ ನೀಡಿದ್ದಾರೆ. ಅನಂತರ ಸಹಜ ಹೆರಿಗೆ ಆಗದಿದ್ದಾಗ ಸಿಜೇರಿಯನ್ ಮಾಡಿದ್ದು, ಮಮತಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಆದರೆ ಆಧಿಕ ರಕ್ತಸ್ರಾವವಾದ ಹಿನ್ನೆಲೆ ಬಾಣಂತಿಯನ್ನ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ಕಳುಹಿಸಿದ್ದರು. ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಗರ್ಭಕೋಶವನ್ನ ತೆಗೆದಿದ್ದು, ಈ ಸಮಯದಲ್ಲಿ ಆಧಿಕ ರಕ್ತಸ್ರಾವದಿಂದ ಮಮತಾ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಮತಾಳ ಸಾವಿನಿಂದ ಕುಟುಂಬಸ್ಥರು ಅಕ್ರೋಶಭರಿತರಾಗಿ ಮೃತದೇಹದೊಂದಿಗೆ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದಾರೆ. ಮಮತಾಳ ಸಾವಿಗೆ ವೈದ್ಯರ ನಿರ್ಲಕ್ಷ್ಯತೆಯೇ ಕಾರಣ, ಹೆರಿಗೆ ಮಾಡಿಸಲು ವೈದ್ಯರು ಆಶಾ ಕಾರ್ಯಕರ್ತೆಯ ಮೂಲಕ 6 ಸಾವಿರ ಹಣ ತೆಗೆದುಕೊಂಡಿದ್ದಾರೆ, ಆಸ್ಪತ್ರೆಯಲ್ಲಿ ರೋಗಿಯನ್ನ ಕರೆದುಕೊಂಡು ಹೋಗಲು ಸಹ ಸಿಬ್ಬಂದಿ ಇಲ್ಲವೆಂದು ಆರೋಪಿಸಿದರು. ಸ್ಥಳಕ್ಕಾಗಮಿಸಿದ ದೊಡ್ಡಬಳ್ಳಾಪುರ ನಗರ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.