ಬೆಂಗಳೂರು: ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರಮಡ ರೆಸಾರ್ಟ್‌ನಲ್ಲಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಪ್ರಸ್ತುತ ರಾಜಕೀಯ ಆಗು ಹೋಗುಗಳ ಬಗ್ಗೆ ಶಾಸಕರ ಜೊತೆ 3 ಸುತ್ತಿನ ಮಾತಕತೆ ನಡೆಸಿದರು.
ಸಭೆಯಲ್ಲಿ ನಾಳೆ ನಡೆಯಲಿರುವ ಅಧಿವೇಶನದಲ್ಲಿ ಸಭಾಧ್ಯಕ್ಷರ ಕಾರ್ಯಾವಳಿಗೆ ಪೂರಕವಾಗಿ ಸದನದಲ್ಲಿ ಭಾಗಿಯಾಗಲು ನಿರ್ಧರಿಸಲಾಯಿತು. ಸಿಎಂ ಬಹುಮತ ಸಾಬೀತಿಗೆ ದಿನಾಂಕ ನಿಗದಿ ಮಾಡುವಂತೆ ಸ್ಪೀಕರ್‌ಗೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಸಿಎಂ ಬಂಡ ಧೈರ್ಯದಿಂದ ಬಹುಮತ ಸಾಬೀತು ಮಾಡುವುದಾಗಿ ಹೇಳಿದ್ದಾರೆ. ಅವರು ನಾಳೆಯೇ ಬಹುಮತ ಸಾಬೀತು ಮಾಡ್ತೀನಿ ಅಂತಾ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಿ. ಇಲ್ಲವಾದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸರ್ಕಾರ ಬದುಕಿಲ್ಲ. ಹಲವಾರು ಸಮಸ್ಯೆಗಳಿವೆ, ಸ್ಥಿರವಾದ ಸರ್ಕಾರ ಬರಲು ಕುಮಾರಸ್ವಾಮಿ ಅವಕಾಶ ಮಾಡಿ ಕೊಡಬೇಕು. ಇಲ್ಲ ಬಹುಮತ ಸಾಬೀತಿಗೆ ದಿನ ನಿಗದಿ ಮಾಡಬೇಕು. ಮೈತ್ರಿ ಪಕ್ಷಗಳ ಬಳಿ ಬಹುಮತ ಸಾಬೀತು ಮಾಡಲು ಸಾಧ್ಯವಿಲ್ಲ. ರಾಜೀನಾಮೆ ಅಂಗೀಕರಿಸುವಂತೆ 15 ಶಾಸಕರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದರು.
ಬಿಜೆಪಿ ಶಾಸಕರ ಗೈರು:
ಸುಪ್ರೀಂಕೋರ್ಟ್ ತೀರ್ಪು ಏನಾಗಬಹುದು ಎಂಬುದನ್ನು ತಿಳಿಯಲು ಕೆಲ ಮುಖಂಡರು ದೆಹಲಿಗೆ ಹೋಗಿದ್ದಾರೆ. ಹೀಗಾಗಿ, ಇಂದಿನ ಸಭೆಗೆ ಆರ್.ಅಶೋಕ್ ಗೈರಾಗಿದ್ದಾರೆ. ಈಶ್ವರಪ್ಪನವರೂ ಕೂಡಾ ಅವರ ವೈಯುಕ್ತಿಕ ಕೆಲಸದಲ್ಲಿದ್ದಾರೆ. ಸಂಬಂಧಿ ವಿಧಿವಶರಾಗಿದ್ದರಿಂದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇವತ್ತಿನ ಸಭೆಯಲ್ಲಿ ಪಾಲ್ಗೊಂಡಿಲ್ಲ ಎಂದು ಶೋಭಾ ಕರಂದ್ಲಾಜೆ ಇದೇ ವೇಳೆ ಸ್ಪಷ್ಟನೆ ನೀಡಿದರು.