ನೆಲಮಂಗಲ(ಬೆಂ. ಗ್ರಾಮಾಂತರ): ತಾಲೂಕಿನಲ್ಲಿ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ, ಕಳೆದ ರಾತ್ರಿ ಪೊಲೀಸರು ರೌಡಿಶೀಟರ್ಗಳ ಮನೆ ಮೇಲೆ ದಾಳಿ ನಡೆಸಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ರವಿ ಚನ್ನಣ್ಣನವರ್ ಆದೇಶನ್ವಯ ನೆಲಮಂಗಲ ಉಪ ವಿಭಾಗದ 5 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 70ಕ್ಕೂ ಹೆಚ್ಚುರೌಡಿಶೀಟರ್ಗಳ ಮನೆ ಮೇಲೆ ದಾಳಿ ಮಾಡಲಾಗಿತ್ತು.
ಬಂಡೆ ಮಂಜ, ಹುಸ್ಕೂರು ಶಿವ, ಬೆತ್ತನಗೆರೆ ಮಂಜ, ಪಾಯಿಝನ್ ರಾಮ, ಕಾಸಿಂ, ಶರವಣ, ಚೇಣಿ, ನಾಗರಾಜ, ರವಿ, ನಿಂಗೇಗೌಡ, ಹರೀಶ, ಬೆಂಕಿ ಮಹದೇವ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿದರು. ಈ ವೇಳೆ, ಮಾರಕಾಸ್ತ್ರಗಳ ಪತ್ತೆಗಾಗಿ ಮನೆಯನ್ನು ತಪಾಸಣೆ ಮಾಡಲಾಯ್ತು.
ಈ ರೌಡಿಶೀಟರ್ಗಳು ಮಾರಕಾಸ್ತ್ರಗಳ ಸರಬರಾಜು, ಗುಂಪುಗಾರಿಕೆ, ಅಕ್ರಮ ಬಡ್ಡಿ, ಇಸ್ಪೀಟು ಅಡ್ಡೆಗಳಲ್ಲಿ ಭಾಗಿಯಾಗಿ ಶಾಂತಿ ಸುವ್ಯವಸ್ಥೆ ಹಾಳು ಮಾಡಿದ್ದರು. ಹೀಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಆದೇಶದಂತೆ ಮಾದನಾಯಕನಹಳ್ಳಿ ಠಾಣೆ CPI ಸತ್ಯನಾರಾಯಣ್, ನೆಲಮಂಗಲ ತಾಲೂಕಿನ CPI ಶಿವಣ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ದಾಳಿ ನಡೆಸಿದಾಗ ಸಿಕ್ಕಿ ಬಿದ್ದ ರೌಡಿಶೀಟರ್ಗಳಿಗೆ ಎಸ್ಪಿ ಖಡಕ್ ವಾರ್ನಿಂಗ್ ನೀಡಿದ್ದು, ಮತ್ತೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದಾರೆ.