ಆನೇಕಲ್: ತಾಲೂಕಿನ ಕೆಲ ರೈತರ ಭೂಮಿಗಳು ದಲ್ಲಾಳಿಗಳ ಕೈಗೆ ಸಿಲುಕಿದ್ದು, ಇದರಿಂದ ನೇಗಿಲಯೋಗಿ ಅವರವರ ಜಮೀನಿಗೆ ಕಾಲಿಡಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಬಂದೊದಗಿದೆ. ರೈತರಿಂದ ಆರು ಕಾಸಿಗೆ ಮೂರು ಕಾಸಿಗೆ ಭೂಮಿ ಕಸಿದುಕೊಂಡ ದಲ್ಲಾಳಿಗಳು, ಹಣ ಗಳಿಸುವಲ್ಲಿ ನಿಷ್ಣಾತರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಭೂಮಿ ಕಳೆದುಕೊಂಡ ಅನ್ನದಾತ ಮಾತ್ರ ಅಕ್ಷರಶಃ ಅನಾಥನಾಗಿದ್ದಾನೆ.
ಇಲ್ಲಿನ ಸರ್ಜಾಪುರ ಹೋಬಳಿಯ ರಾಮನಾಯ್ಕನಹಳ್ಳಿಯ ಭೂಮಿಯು ಇತ್ತ ರೈತನ ಪಾಲಾಗದೇ ಅತ್ತ ಅಕ್ರಮವಾಗಿ ಕೊಂಡ ಭೂ ಮಾಫಿಯಾದವರ ಪಾಲೂ ಆಗದೇ ದಲ್ಲಾಳಿಗಳ ಲಾಭಕ್ಕೆ ತುತ್ತಾಗಿದೆ. ಇದರಿಂದ ಇಬ್ಬರೂ ಅಡಕತ್ತರಿಯಲ್ಲಿ ಸಿಲುಕಿ ನರಕಯಾತನೆ ಅನುಭವಿಸುತ್ತಿದ್ದರೆ ದಲ್ಲಾಳಿಗಳು ಮಾತ್ರ ಇಬ್ಬರ ನಡುವಿನ ಜಗಳದಲ್ಲಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ವ್ಯವಹಾರದಲ್ಲಿ ತಾಲೂಕು ಹಾಗೂ ಜಿಲ್ಲಾಡಳಿತದ ಕೆಲ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಸರ್ವೆ ನಂ. 29 ರ ಪೈಕಿ 76 ಎಕರೆ 36 ಗುಂಟೆ ಜಮೀನು ಮೊದಲು ಇಲ್ಲಿ ಗೋಮಾಳವಾಗಿತ್ತು. ಅದರಲ್ಲಿ ಆಗ ಊರಿನ 19 ಮಂದಿ ರೈತರು ಉಳುಮೆ ಮಾಡುತ್ತಿದ್ದರು. ಇದನ್ನು ಮನಗಂಡು ಆಗಿನ ಸರ್ಕಾರ (1977-78ರ ಸಾಲಿನಲ್ಲಿ) ಊಳುವವನೇ ಭೂಮಿ ಒಡೆಯ ಎಂಬ ಯೋಜನೆ ತಂದು 46 ಮಂದಿಗೆ 51 ಎಕರೆ 20 ಗುಂಟೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿಯನ್ನೂ ವಿತರಣೆ ಮಾಡಿತ್ತು. ಆದರೆ, ತಾಲೂಕಿನಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ ಎಂದು ಅರಿತ ದಲ್ಲಾಳಿಗಳು, ರೈತರಿಗೆ ಇಲ್ಲ-ಸಲ್ಲದ ಹೇಳಿಕೆ ನೀಡಿ ಹೆದರಿಸುತ್ತಿದ್ದಾರೆ. ಸಾಲದೆಂಬಂತೆ ಮೂರು ಕಾಸಿನ ಆಸೆ ತೋರಿಸಿ ಸಾಗುವಳಿ ಚೀಟಿ ಪಡೆದು ಲಕ್ಷಾಂತರ ರೂ. ವ್ಯಾಪಾರ ಕುದುರಿಸಿ ಜಮೀನನ್ನು ಪರಭಾರೆ ಮಾಡಿಸುತ್ತಿದ್ದಾರೆ. ಕ್ರಯ ಪತ್ರದಲ್ಲೇನೋ ಹಣದ ಕಂತೆ ಉಲ್ಲೇಖವಾಗಿರುತ್ತೆ.
ಆದರೆ, ಆಯಾ ಖಾತೆಯ ಹೆಸರಿನ ರೈತರಿಗೆ ಚೆಕ್ಕುಗಳ ಮೂಲಕ ಹಣ ವಿತರಿಸುತ್ತಿದ್ದಾರೆ. ಆದರೆ, ಇತ್ತ ಅವರು ಕೊಟ್ಟ ಹಣವೂ ಸಂದಾಯವಾಗಿಲ್ಲ, ಅತ್ತ ಭೂಮಿ ಕೊಟ್ಟ ರೈತರಿಗೆ ಅಲ್ಲಿ ಹೆಜ್ಜೆ ಇಡಲೂ ಆಗುತ್ತಿಲ್ಲ. ದಲ್ಲಾಳಿಗಳು ಮಾತ್ರ ಇದರ ಲಾಭ ಪಡೆದುಕೊಳ್ಳುವ ಮೂಲಕ ರಾಮನಾಯಕನಹಳ್ಳಿ ರೈತರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಸ್ಥಳೀಯರ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ರೈತರು ಸುತ್ತದ ಕಚೇರಿಗಳಿಲ್ಲ, ಎಟಿ ರಾಮಸ್ವಾಮಿ ಸಮಿತಿಗೂ, ಲಂಚ ಮುಕ್ತ ಕರ್ನಾಟಕ, ಮತ್ತೆ ಸಂಬಂಧಪಟ್ಟ ಜಿಲ್ಲಾಧಿಕಾರಿ, ತಹಶೀಲ್ದಾರ್, ಉಪವಿಭಾಗಾಧಿಕಾರಿ ಕಚೇರಿಗಳ ಮೆಟ್ಟಿಲು ಹತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ.