ನೆಲಮಂಗಲ(ಬೆಂಗಳೂರು): ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯೊಂದರಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಒಂದೇ ಕ್ಲಾಸ್ ರೂಮ್ನಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯ ಚಿಕ್ಕಬಾಣಾವಾರದ ಸರ್ಕಾರಿ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಲಾಗಿದೆ. ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ ಇಲ್ಲದೇ, ಒಂದೇ ಕ್ಲಾಸ್ ರೂಂನಲ್ಲಿ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿತ್ತು. ಮಾಧ್ಯಮದವರು ದೃಶ್ಯ ಸೆರೆಹಿಡಿಯುತ್ತಿದ್ದಂತೆ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳನ್ನ ಸಾಮಾಜಿಕ ಅಂತರದಲ್ಲಿ ಕೂರಿಸಿ, ಶಿಕ್ಷಕರರು ಪಾಠ ಮಾಡುತ್ತಿದ್ದಾರೆ.
ವಿಷಯ ತಿಳಿದ ಕೂಡಲೇ ಚಿಕ್ಕಬಾಣಾವಾರ ಪುರಸಭೆಯಿಂದ ಶಾಲಾ ಕೊಠಡಿ ಮತ್ತು ಆವರಣಕ್ಕೆ ಸ್ಯಾನಿಟೈಸ್ ಮಾಡಲಾಗಿದೆ. ಈಗಾಗಲೇ ಓರ್ವ ಶಿಕ್ಷಕ ಸೇರಿದಂತೆ ಮೂವರು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದರೂ ಶಾಲಾ ಸಿಬ್ಬಂದಿ ಎಚ್ಚೆತ್ತುಕೊಳ್ಳದಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.