ಬೆಂಗಳೂರು : 2021-22ನೇ ಸಾಲಿನಲ್ಲಿ ಬೆಳೆ ಸಮೀಕ್ಷೆ ಆಧಾರದ ಮೇಲೆ “ರೈತ ಸಿರಿ ಯೋಜನೆ”ಯಡಿ ಮುಂಗಾರು ಹಂಗಾಮಿನಲ್ಲಿ 27,888 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗಿದ್ದು, ಇದುವರೆಗೆ 13,758 ರೈತರಿಗೆ ಒಟ್ಟು 9.85 ಕೋಟಿ ರೂ. ಪ್ರೋತ್ಸಾಹಧನ ಪಾವತಿಸಲಾಗಿದೆ. ಉಳಿದ ರೈತರಿಗೆ ಪ್ರೋತ್ಸಾಹಧನ ಪಾವತಿ ಪ್ರಗತಿಯಲ್ಲಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶವನ್ನು ವಿಸ್ತರಿಸುವ ನಿಟ್ಟಿನಲ್ಲಿ “ರೈತ ಸಿರಿ ಯೋಜನೆ”ಯಡಿ ಸಾವಯವ ಮತ್ತು ಸಾಂಪ್ರದಾಯಿಕವಾಗಿ ಬೆಳೆಯುವ ಸಿರಿಧಾನ್ಯಗಳಾದ ನವಣೆ, ಹಾರಕ, ಸಾಮೆ, ಕೊರಲೆ, ಬರಗು ಮತ್ತು ಊದು ಬೆಳೆಗಳನ್ನು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ.10 ಸಾವಿರಗಳಂತೆ ಗರಿಷ್ಠ ಎರಡು ಹೆಕ್ಟೇರ್ಗೆ ಸೀಮಿತವಾಗುವಂತೆ ಡಿಬಿಟಿ ಮೂಲಕ ಪ್ರೋತ್ಸಾಹಧನ ನೀಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯದ ಉಭಯ ಸದನಗಳಲ್ಲಿ ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದ್ದು, ಕೃಷಿ, ಆರೋಗ್ಯ, ಶಿಕ್ಷಣ, ಸೇರಿದಂತೆ ಮತ್ತಿತರ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಒತ್ತು ನೀಡಿದೆ ಎಂದಿದ್ದಾರೆ ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಹಲವು ಅಭಿವೃದ್ಧಿ ಮತ್ತು ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಪ್ರಕಟಣೆಯಲ್ಲಿ ಸಚಿವರು ತಿಳಿಸಿದ್ದಾರೆ.
ಓದಿ :ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ DC ಮಹಾಂತೇಶ್ ಬೀಳಗಿ