ನೆಲಮಂಗಲ : ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಲಾರಿಗೆ ಹಿಂಬದಿಯಿಂದ ಬುಲೆರೊ ವಾಹನ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ದುರ್ಮರಣಕ್ಕೀಡಾಗಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 48ರ ತಿಪ್ಪಗೊಂಡನಹಳ್ಳಿ ಬಳಿ ಇಂದು ನಡೆಯಿತು.
ಬುಲೆರೋದಲ್ಲಿದ್ದ ಕೇಶವ ರೆಡ್ಡಿ(45), ಶ್ರೀನಿವಾಸ್ (55) ಮೃತರು. ಸೋಮಶೇಖರ್, ಬೋಡಿಯಪ್ಪ, ಮುನಿವೆಂಕಟಪ್ಪ ಎಂಬವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದವರು. ಮುಳಬಾಗಿಲು ತಾಲೂಕು ಅಂಗೊಂಡಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಂಚಾಯತಿ ಸದಸ್ಯರು ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಸಹಿತ ಬಾಂಬೆ, ಶಿರಡಿ ಪ್ರವಾಸ ಮುಗಿಸಿ, ವಾಪಸಾಗುತ್ತಿದ್ದಾಗ ನೆಲಮಂಗಲ ಹೊರವಲಯದ ದಾಸನಪುರ ಬಳಿಯ ಅವ್ವೇರಹಳ್ಳಿಯ ಫಾರಂ ಹೌಸ್ನಲ್ಲಿ ತಂಗಿದ್ದರು. ಇಂದು ದಾಬಸ್ ಪೇಟೆಗೆ ಕಾರ್ಯನಿಮಿತ್ತ ಹೋಗುತ್ತಿದ್ದಾಗ ತಿಪ್ಪಗೊಂಡನಹಳ್ಳಿ ಬಳಿಯಲ್ಲಿ ಕಂಟೈನರ್ ಲಾರಿಗೆ ಬುಲೆರೊ ಡಿಕ್ಕಿಯಾಗಿದೆ.
17 ಸದಸ್ಯರಿರುವ ಅಂಗೋಂಡಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ ನಾಳೆ ನಡೆಯಬೇಕಿದ್ದು, ಎಲ್ಲರೂ ಮುಂಜಾನೆಯೇ ತೆರಳಿ ಚುನಾವಣೆಯಲ್ಲಿ ಭಾಗವಹಿಸುವ ಉದ್ದೇಶ ಹೊಂದಿದ್ದರು. ಆದರೆ, ಅಪಘಾತದಲ್ಲಿ ಸಾವನ್ನಪ್ಪಿದ ಕೇಶವರೆಡ್ಡಿ ಪತ್ನಿ ಹಾಗೂ ಶ್ರೀನಿವಾಸ್ ಅತ್ತಿಗೆ ಸದಸ್ಯರಾಗಿದ್ದು ವಿಧಿಯಾಟವೇ ಬೇರೆಯಾಗಿದೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್ಪಿ ಎಂ.ಎಲ್.ಪುರುಷೋತ್ತಮ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆದ್ದಾರಿ ಪಕ್ಕದಲ್ಲಿ ನಿಂತಿದ್ದವರಿಗೆ ಕಾರು ಡಿಕ್ಕಿ: ಇನ್ನೊಂದೆಡೆ, ವೇಗವಾಗಿ ಚಲಿಸುತ್ತಿದ್ದ ಕಾರು ಡಿಕ್ಕಿ ಗುದ್ದಿ ಇಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಊರಿಗೆ ತೆರಳಲು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಕ್ಕಾಗಿ ಕಾಯುತ್ತಾ ನಿಂತಿದ್ದಾಗ ವ್ಯಕ್ತಿಗಳ ಮೇಲೆ ಕಾರು ಹರಿದಿದೆ. ಮೃತರನ್ನು ವಿರೂಪಾಕ್ಷಪ್ಪ ಕಾಳಿ ಮತ್ತು ಚಿದಾನಂದ ಕುರುಬರ ಎಂದು ಗುರುತಿಸಲಾಗಿದೆ. ನೀರಲಗಿ ಗ್ರಾಮದಿಂದ ಶಿಗ್ಗಾಂವಿ ಪಟ್ಟಣಕ್ಕೆ ಹೊರಟ್ಟಿದ್ದಾಗ ಅವಘಡ ಸಂಭವಿಸಿದೆ. ವಿರೂಪಾಕ್ಷಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ವ್ಯಕ್ತಿ ಚಿದಾನಂದ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಹೊಸಕೋಟೆ: ಬೈಕ್ಗಳಿಗೆ ಡಿಕ್ಕಿ ಹೊಡೆದು ಮರಕ್ಕೆ ಗುದ್ದಿದ ಕಾರು.. ಸಿಸಿಟಿವಿ ವಿಡಿಯೋ