ದೊಡ್ಡಬಳ್ಳಾಪುರ : ದಸರಾ ಹಬ್ಬಕ್ಕೆಂದು ಮಾವನ ಮನೆಗೆ ಬಂದ ಬಾಲಕಿ ಕಾಲು ಜಾರಿ ಕೆರೆಯಲ್ಲಿ ಮುಳುಗಿದ್ದು, ಅವಳನ್ನು ರಕ್ಷಿಸಲು ಹೋದ ಸೋದರ ಮಾವ ಸಹ ನೀರಿನಲ್ಲಿ ಸಿಲುಕಿ ಸಾವನ್ನಪ್ಷಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಂಜುನಾಥ್(22) ಮತ್ತು ಈತನ ಮಾವನ ಮಗಳು ಸಿಂಚನಾ(7) ಇಬ್ಬರೂ ಊರಿನ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ದೈವಿಗಳು. ಯಲಹಂಕ ಬಳಿಯ ಕಣ್ಣೂರಿನಿಂದ ಕಮಲಾಪುರದ ಅಜ್ಜಿ ಮನೆಯಲ್ಲಿ ಹಬ್ಬ ಮಾಡಬೇಕೆಂದು ಸಂಭ್ರಮದಿಂದ ದೊಡ್ಡಮ್ಮನ ಜೊತೆ ಬಂದಿದ್ದ ಸಿಂಚನಾ, ಮಂಗಳವಾರ ಬೆಳಗ್ಗೆ ಮಾವ ಮಂಜುನಾಥ್ ಜೊತೆ ಕೆರೆ ಬಳಿ ಬಹಿರ್ದೆಸೆಗೆಂದು ಹೋಗಿದ್ದಾಳೆ. ಕೆರೆಯ ಹೊಂಡದ ದಡದಲ್ಲಿ ನಿಂತಿದ್ದ ಸಿಂಚನಾ ಕಾಲುಜಾರಿ ನೀರಿಗೆ ಬಿದ್ದು ಮುಳುಗಿದ್ದಾಳೆ. ಈ ದೃಶ್ಯ ನೋಡಿದ ಮಂಜುನಾಥ್ ಸಿಂಚನಾಳನ್ನು ಕಾಪಾಡಲು ನೀರಿಗಿಳಿದ್ದಾನೆ. ಆದರೆ, ಆತ ಸಹ ಹೂಳಿನಲ್ಲಿ ಸಿಲುಕಿದ್ರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಮನೆಯಿಂದ ಹೋಗಿ ಅರ್ಧಗಂಟೆಯಾದರೂ ಇಬ್ಬರೂ ಬಾರದಿದ್ದರಿಂದಾಗಿ ಅನುಮಾನಗೊಂಡ ಕುಟುಂಬದ ಸದಸ್ಯರು ಕೆರೆ ಬಳಿ ಬಂದು ನೋಡಿದಾಗ ದಡದಲ್ಲಿ ಚಪ್ಪಲಿ ಕಾಣಿಸಿದೆ. ಊರಿನ ಹುಡುಗರು ನೀರಿಗಿಳಿದು ನೋಡಿದಾಗ ಇಬ್ಬರ ಮೃತದೇಹ ಪತ್ತೆಯಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.