ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಬ್ಬರಿಗೆ ಶುಕ್ರವಾರ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ತಾಲೂಕಿನ ಕುಂದಾಣ ಹೋಬಳಿಯ ಇಲ್ತೊರೆ ಗ್ರಾಮದ ನಿವಾಸಿಯಾದ 35 ವರ್ಷದ ವ್ಯಕ್ತಿ (ಪಿ-2550), ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆ ದೇವನಹಳ್ಳಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನ ಆರೋಗ್ಯ ತಪಾಸಣೆಗೊಳಪಟ್ಟಾಗ ಸೋಂಕು ದೃಢಪಟ್ಟಿದೆ. ಸೋಂಕಿತ ವ್ಯಕ್ತಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ನೆಲಮಂಗಲದಲ್ಲಿ ಎರಡನೇ ಕೊರೊನಾ ಪ್ರಕರಣ ಬಾಣಸವಾಡಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಗ್ರಾಮದ 18 ವಯಸ್ಸಿನ ಯುವಕನಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಯುವಕನ ಪ್ರೈಮರಿ ಸಂಪರ್ಕದಲ್ಲಿದ್ದ 6 ಜನರಿಗೆ ನೆಲಮಂಗಲ ಕೋವಿಡ್-19 ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗಿದೆ.
ಬಾಣಸವಾಡಿ ಗ್ರಾಮ ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಸೋಂಕಿತ ಯುವಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಲಾಗಿದೆ. ಯುವಕನಿಗೆ ಸೋಂಕು ಹರಡಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ಕಲೆಹಾಕುತ್ತಿದೆ.