ನೆಲಮಂಗಲ(ಬೆಂಗಳೂರು): ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದು, ವಿವಾದಿತ ಜಾಗದಲ್ಲಿ ಲೇಔಟ್ ಗೆ ರಸ್ತೆ ನಿರ್ಮಿಸಲು ಮುಂದಾದಾಗ ಮಹಿಳೆಯರಿಬ್ಬರು ತಡೆಯನ್ನುಂಟು ಮಾಡಿದ್ದು, ಅವರ ಮೇಲೆಯೇ ಜೆಸಿಬಿಯಿಂದ ಮಣ್ಣು ಸುರಿಯುವ ಯತ್ನ ನಡೆದಿದೆ ಎನ್ನಲಾಗುತ್ತಿದೆ.
ಬೆಂಗಳೂರು ಉತ್ತರ ತಾಲೂಕಿನ ಬೆತ್ತನಗೆರೆ ಬಳಿಯ ಹಲಸಿಮರದಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸರ್ವೆ ನಂಬರ್ 14/6 ರ 32 ಗುಂಟೆ ಜಮೀನಿನ ವಿಚಾರಣೆ ಸಧ್ಯ ಕೋರ್ಟ್ ನಲ್ಲಿ ನಡೆಯುತ್ತಿದೆ. ಆದರೆ ಇದೇ ಜಾಗದಲ್ಲಿ ಲೇಔಟ್ ಗೆ ರಸ್ತೆ ನಿರ್ಮಿಸಲು ಲೇಔಟ್ ಮಾಲೀಕ ಮುಂದಾದಾಗ ಹರ್ಷಿತಾ ಹಾಗೂ ಹನುಮಕ್ಕ ಎಂಬುವ ಮಹಿಳೆಯರು ರಸ್ತೆ ನಿರ್ಮಾಣಕ್ಕೆ ತಡೆಯೊಡ್ಡಿದ್ದಾರೆ. ಮಹಿಳೆಯರನ್ನು ಹೆದರಿಸಲು ಜೆಸಿಬಿಯಿಂದ ಮಣ್ಣು ಸುರಿಯುವ ಯತ್ನ ನಡೆದಿದೆ ಎನ್ನಲಾಗಿದ್ದು, ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಹರ್ಷಿತಾ ಮತ್ತು ಹನುಮಕ್ಕರಿಗೆ ಸೇರಿದ ಜಮೀನಿನಲ್ಲಿ ಮೋಹನ್ ಕುಮಾರ್, ಶಿವಕುಮಾರ್, ರೇಣುಕಾ ಪ್ರಸಾದ್ ಹಾಗೂ ಅನಂತ್ ಎಂಬುವರು ಲೇಔಟ್‌ಗಾಗಿ ಅಕ್ರಮವಾಗಿ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.