ದೊಡ್ಡಬಳ್ಳಾಪುರ : ಭೂಮಿ ಸಮತಟ್ಟು ಮಾಡುವ ಕೆಲಸಕ್ಕೆ ಬಂದಿದ್ದ ವೇಳೆ ಟ್ರ್ಯಾಕ್ಟರ್ ಕಂಪ್ರೆಸರ್ ಸ್ಫೋಟಗೊಂಡು ಚಾಲಕ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಸಿಗೇಪಾಳ್ಯದಲ್ಲಿ ನಡೆದಿದೆ.
ಜಂಬೇರಿ (36) ಎಂಬಾತ ಮೃತಪಟ್ಟವನಾಗಿದ್ದು, ಈತ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ರಾಜಗೊಲ್ಲಹಳ್ಳಿಯ ನಿವಾಸಿಯಾಗಿದ್ದು, ತುಮಕೂರಿನ ಎಲೆಕ್ಯಾತನಹಳ್ಳಿಯ ಕ್ರಷರ್ ನಲ್ಲಿ ಕೆಲಸ ಮಾಡುತ್ತಿದ್ದನು.

ಸಿಗೇಪಾಳ್ಯ ಗ್ರಾಮದಲ್ಲಿ ಭೂಮಿ ಸಮತಟ್ಟು ಮಾಡಲು ಬಂಡೆಯೊಂದನ್ನು ಒಡೆಯಬೇಕಿತ್ತು. ಇದಕ್ಕಾಗಿ ಟ್ರ್ಯಾಕ್ಟರ್ ತಂದಿದ್ದು, ಜೊತೆಗೆ ಇಬ್ಬರೂ ಕೂಲಿ ಕಾರ್ಮಿಕರನ್ನೂ ಕರೆತಂದಿದ್ದ. ಬಂಡೆ ಒಡೆಯಲು ಸುರಕ್ಷತಾ ಕ್ರಮ ತೆಗೆದೂಕೊಳ್ಳದೇ ಇದ್ದಾಗ ಟ್ರ್ಯಾಕ್ಟರ್ ಕಂಪ್ರೆಸರ್ ಸ್ಫೋಟಗೊಂಡು ವ್ಯಕ್ತಿಯ ದೇಹ ಛಿದ್ರವಾಗಿದೆ. ಜೊತೆಯಲ್ಲಿದ್ದ ಕೂಲಿ ಕಾರ್ಮಿಕರು ನಾಪತ್ತೆಯಾಗಿದ್ದು, ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.