ಬೆಂಗಳೂರು : ದಿನಪತ್ರಿಕೆ ಸರಬರಾಜು ಮಾಡುತ್ತಿದ್ದ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ದಿನಪತ್ರಿಕೆಯ ಏಜೆಂಟ್ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಕೊಪ್ಪ ಗೇಟ್ ಬಳಿ ನಡೆದಿದೆ.
ಕೃಷ್ಣ (26) ಮೃತ ದಿನಪತ್ರಿಕೆ ಏಜೆಂಟ್. ಈತ ಖಾಸಗಿ ದಿನಪತ್ರಿಕೆಯೊಂದರ ಏಜೆಂಟ್ ಆಗಿದ್ದು, ಪ್ರತಿನಿತ್ಯ ಬೆಂಗಳೂರಿನಿಂದ ಆನೇಕಲ್ ಪಟ್ಟಣಕ್ಕೆ ಟಾಟಾ ಏಸ್ ವಾಹನದ ಮೂಲಕ ದಿನಪತ್ರಿಕೆ ಸರಬರಾಜು ಮಾಡುತ್ತಿದ್ದರು. ಎಂದಿನಂತೆ ಇಂದು ಸಹ ದಿನಪತ್ರಿಕೆ ಸರಬರಾಜು ಮಾಡುವ ವೇಳೆ ಬನ್ನೇರುಘಟ್ಟ ಕಡೆಯಿಂದ ಆನೇಕಲ್ ಪಟ್ಟಣಕ್ಕೆ ಬರುವ ಮಾರ್ಗ ಮಧ್ಯೆ ಕೊಪ್ಪ ಗೇಟ್ ಬಳಿ ಟಿಪ್ಪರ್ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದ್ದು, ಏಜೆಂಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದು, ಲಾರಿ ಚಾಲಕನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.