ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಗಿ ಬೆಳೆ ನೆಲಕಚ್ಚಿದ್ದು, ರೈತರು ಆತಂಕಗೊಂಡಿದ್ದಾರೆ. ಬೆಂಗಳೂರ ಗ್ರಾಮಾಂತರ ಜಿಲ್ಲೆಯ ಪ್ರಮುಖ ಆಹಾರ ಬೆಳೆ ರಾಗಿ, 2022-23 ಸಾಲಿನ ಮುಂಗಾರು ಹಂಗಾಮಿನಲ್ಲಿ 57,370 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ.
ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಿಂದ ಭರ್ಜರಿ ಫಸಲು ಬಂದಿದೆ. ಈಗಾಗಲೇ ಕೊಯ್ಲು ಕಾರ್ಯ ಪ್ರಾರಂಭವಾಗಿದೆ. ಆದರೆ, ಮಾಂಡೌಸ್ ಚಂಡಮಾರುತದಿಂದ ಕಳೆದ ನಾಲ್ಕೈದು ದಿನದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೊಲದಲ್ಲೇ ರಾಗಿ ಬೆಳೆ ನೆಲಕಚ್ಚುತ್ತಿದೆ.
ದೊಡ್ಡಬಳ್ಳಾಪುರ ತಾಲೂಕಿನ ಸಾವಿರಾರು ಎಕರೆಯ ರಾಗಿ ಹೊಲ ಮಳೆಗೆ ಹಾನಿಯಾಗಿದೆ. ತಾಲೂಕಿನ ಸೋತೇನಹಳ್ಳಿ ಗ್ರಾಮದ ರೈತ ಮಂಜುನಾಥ್ ಎಂಬುವರ 6 ಎಕರೆ ರಾಗಿ ಹೊಲ ಮಳೆಯಿಂದ ಸಂಪೂರ್ಣ ನೆಲಕಚ್ಕಿದೆ. ಮಳೆ ನಿಂತರೆ ರಾಗಿ ಕಟಾವ್ ಕಾರ್ಯ ಪ್ರಾರಂಭವಾಗುತ್ತೆ. ಹೀಗೆ ಮಳೆ ಮುಂದುವರಿದರೆ ಅತಿಯಾದ ತೇವಾಂಶದಿಂದ ರಾಗಿ ಬೆಳೆ ಹೊಲದಲ್ಲಿಯೇ ಮೊಳಕೆ ಬರಲು ಪ್ರಾರಂಭಿಸುತ್ತದೆ.
ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ ಎಂದು ರೈತರು ಆತಂಕಗೊಂಡಿದ್ದಾರೆ. ಸದ್ಯ ರೈತರು ರಾಗಿ ಕಟಾವ್ ಮಾಡಲು ಬಿಸಿಲಿಗಾಗಿ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ:ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು.. ಜಮೀನಿಗೆ ನುಗ್ಗಿ ಪುಂಡಾಟಿಕೆ