ನೆಲಮಂಗಲ (ಬೆಂಗಳೂರು ಗ್ರಾಮಾಂತರ) : ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದೆ ಸಾಮಾನ್ಯವಾಗಿ 9 ರಿಂದ 10 ಸೀಟ್ ಬರುತ್ತಿತ್ತು. ಆದರೆ, ಪ್ರಿಯಾಂಕಾ ಗಾಂಧಿ ಅವರಿಂದ ಈಗ ಒಂದೆರಡು ಸೀಟ್ ಬರಬಹುದು ಅಷ್ಟೇ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಕೆ ಸುಧಾಕರ್ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ನಾ ನಾಯಕಿ ಸಮಾವೇಶದ ಬಗ್ಗೆ ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಸ್ವಾಭಾವಿಕವಾಗಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಕೆಲವೊಂದಿಷ್ಟು ಸೀಟುಗಳನ್ನು ಗೆಲ್ಲುತ್ತಿದ್ದರು, ಪ್ರಿಯಾಂಕಾ ಗಾಂಧಿ ಅವರಿಂದ ಒಂದು ಎರಡು ಸ್ಥಾನಗಳು ಹೆಚ್ಚಾಗಬಹುದು ಎಂದು ಕುಟುಕಿದರು.
ನಮ್ಮ ಸರ್ಕಾರದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೆಚ್ಚು ಒತ್ತು ನೀಡಿದ್ದಾರೆ. ಕಾಂಗ್ರೆಸ್ ಅವರು ಬಿಡುಗಡೆ ಮಾಡಿರುವ ಪ್ರಣಾಳಿಕೆ ಘೋಷಣೆ ಕೇವಲ ಘೋಷಣೆಯಾಗಿ ಉಳಿಯುತ್ತದೆ. ಚುನಾವಣೆಗೂ ಮುಂಚೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಪ್ರತಿಯೊಂದು ಮಹಿಳೆಗೆ ಕಟುಂಬದ ಪೋಷಣೆಗೆ ಮತ್ತು ಮಹಿಳಾ ಸಬಲೀಕರಣಕ್ಕೆ ನಿರ್ದಿಷ್ಟವಾದ ಕಾರ್ಯಕ್ರಮಗಳನ್ನು ನೀಡುತ್ತಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಹೇಳಿದರು.
2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ರಾಜ್ಯ ಕಾಂಗ್ರೆಸ್ ಪಕ್ಷ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೋಮವಾರ ’ನಾ ನಾಯಕಿ’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಹಿನ್ನಲೆ ರಾಜ್ಯ ಬಿಜೆಪಿ ನಾಯಕರು ಟೀಕಾಪ್ರಹಾರವನ್ನು ನಡೆಸಿದ್ದಾರೆ, ಉನ್ನತ ಶಿಕ್ಷಣ ಸಚಿವ ಡಾ. ಸಿ ಅಶ್ವತ್ಥ ನಾರಾಯಣ, ಲೋಕೊಪಯೋಗಿ ಸಚಿವ ಸಿಸಿ ಪಾಟೀಲ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಏರ್ಪಡಿಸಿದ್ದ ಕಾರ್ಯಕ್ರಮದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಚುನಾವಣೆ ಸಮಯದಲ್ಲಿ ಆರೋಪಗಳು ಸರ್ವೇ ಸಾಮಾನ್ಯ: ರಾಜ್ಯದಲ್ಲಿ ಕಮಿಷನ್ ವಿಚಾರ ಮತ್ತೆ ಸದ್ದು ಮಾಡಿದ್ದು, ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಚುನಾವಣೆ ಹೊಸ್ತಿಲಲ್ಲಿ ಇರುವಾಗ ಭ್ರಷ್ಟಾಚಾರ ಆರೋಪಗಳು ಸರ್ವೆ ಸಾಮಾನ್ಯ. ವಿರೋಧ ಪಕ್ಷ ಮಾಡುವ ಆರೋಪಗಳಿಗೆ ಉತ್ತರ ಕೊಡುವ ಜವಾಬ್ದಾರಿ ನಮ್ಮ ಸರ್ಕಾರದ ಮೇಲಿದ್ದು, ಅದನ್ನು ಸಮರ್ಥವಾಗಿ ನಾವು ಮಾಡುತ್ತೇವೆ ಎಂದು ಉತ್ತರಿಸಿದರು.
ಭ್ರಷ್ಟಾಚಾರದ ಆರೋಪ ಮಾಡಿದರೆ, ಅದರ ಮೂಲ ಎಲ್ಲಿ ಮತ್ತು ಯಾವ ಪಕ್ಷದ ಯಾವ ಮುಖಂಡರು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವುದರ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು. ಅಲ್ಲದೇ ಹಿಂದಿನ ಸರ್ಕಾರದಿಂದ ಹಿಡಿದು ನಮ್ಮ ಸರ್ಕಾರ ವರೆಗೂ ಎಲ್ಲವೂ ಸಂಪೂರ್ಣ ತನಿಖೆಯಾಗಲಿ ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ಮಾಡುವುದು ಸರಿ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ವಿಜಯ ಸಂಕಲ್ಪ ಅಭಿಯಾನಕ್ಕೆ ಸಿಂದಗಿಯಿಂದ ಜೆಪಿ ನಡ್ಡಾ ಚಾಲನೆ: ಡಾ. ಸಿ.ಎನ್.ಅಶ್ವತ್ಥ ನಾರಾಯಣ