ದೊಡ್ಡಬಳ್ಳಾಪುರ: ವೃದ್ಧೆಯೊಬ್ಬರು ರಸ್ತೆಯಲ್ಲಿ ಬರುವಾಗ ಆಕೆಯನ್ನು ಮಾತನಾಡಿಸುವ ನೆಪದಲ್ಲಿ ತಡೆದ ಪೊಲೀಸರು, ಇಲ್ಲಿ ಸರಗಳ್ಳರಿದ್ದಾರೆ ಸರವನ್ನು ಕೊಡಿ ಕವರ್ನಲ್ಲಿ ಇಟ್ಟುಕೊಡುತ್ತೇವೆ ಎಂದು ಹೇಳಿ ವೃದ್ಧೆಗೆ ಕವರ್ ಕೊಟ್ಟು ಮನೆಗೆ ಕಳುಹಿಸಿದ್ದಾರೆ. ಕೊಟ್ಟ ಕವರನ್ನು ಮನೆಗೆ ಬಂದು ಬಿಚ್ಚಿ ನೋಡಿದಾಗ ಪೊಲೀಸರ ನಕಲಿ ಬಣ್ಣ ಬಯಲಾಗಿದೆ. ಕವರ್ನಲ್ಲಿ ಚಿನ್ನದ ಸರದ ಬದಲಿಗೆ ಇದ್ದದ್ದು ಸಣ್ಣ ಸಣ್ಣ ಕಲ್ಲುಗಳು.
ದೊಡ್ಡಬಳ್ಳಾಪುರ ನಗರದ ರುಮಾಲೆ ಛತ್ರದ ಸರ್ಕಲ್ ಬಳಿ ಈ ಘಟನೆ ಜರುಗಿದೆ. ಗಾಣಿಗರ ಪೇಟೆ ನಿವಾಸಿ ಸರೋಜಮ್ಮ (75) ನಕಲಿ ಪೊಲೀಸರಿಂದ ವಂಚನೆಗೆ ಒಳಗಾದವರು. ಇವರು 35 ಗ್ರಾಂ ತೂಕದ ಚಿನ್ನದ ಸರವನ್ನ ಕಳೆದುಕೊಂಡಿದ್ದಾರೆ. ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, 30ರ ವಯೋಮನದ ಯುವಕರು ಕೃತ್ಯವನ್ನ ಎಸಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಗೆ ಖಾರದಪುಡಿ ಎರಚಿ ಸರಗಳ್ಳತನ
ಪ್ರಕರಣದ ಬಗ್ಗೆ..
ನಗರದ ರುಮಾಲೆ ಛತ್ರದ ಬಳಿ ಹಾಲಿನ ಅಂಗಡಿ ಇಟ್ಟು ಕೊಂಡಿರುವ ಸರೋಜಮ್ಮ, ದಿನದ ಕಲೆಕ್ಷನ್ ತೆಗೆದುಕೊಳ್ಳಲು ಜೂನ್ 30 ರ ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ರುಮಾಲೆ ಛತ್ರದ ಸರ್ಕಲ್ ಬಳಿ ನಡೆದು ಹೋಗುತ್ತಿದ್ದರು. ಇದೇ ಸಮಯದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ನಾವು ಪೊಲೀಸರು, ಇಲ್ಲಿ ಸರಗಳ್ಳರಿದ್ದಾರೆ, ಚಿನ್ನಾಭರಣ ಧರಿಸಿಕೊಂಡು ಓಡಾಡಬಾರದೆಂದು ಸಲಹೆ ನೀಡಿದ್ದಾರೆ.
ಸಾಮಾನ್ಯ ಧರಿಸಿನಲ್ಲಿದ್ದವರನ್ನ ನೋಡಿದ ವೃದ್ಧೆ, ನೀವು ನಿಜವಾದ ಪೊಲೀಸರೇ ಪೊಲೀಸ್ ಯೂನಿಫಾರ್ಮ್ ಯಾಕೆ ಧರಿಸಿಲ್ಲವೆಂದು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕಳ್ಳರನ್ನ ಹಿಡಿಯಲು ಸಾಮಾನ್ಯ ಬಟ್ಟೆಯಲ್ಲೇ ಬರೋದು ಎಂದಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ವಿಚಿತ್ರ ಘಟನೆ.. ಕಂಡವರಿಗೆಲ್ಲ ಡ್ರಾಪ್ ಕೊಡುವ ಮುನ್ನ ಎಚ್ಚರ!
ಇನ್ನು ಮೊದಲೇ ಏರ್ಪಾಡು ಮಾಡಿಕೊಂಡಿದ್ದ ಅವರದೇ ಕಡೆಯ ವ್ಯಕ್ತಿ ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದಾನೆ. ಆತನಿಗೆ ಪೊಲೀಸರಂತೆ ಗದರಿ ಆಭರಣವನ್ನ ಜೇಬಿನಲ್ಲಿ ಇಟ್ಟುಕೋ ಎಂದು ಹೇಳಿದ್ದಾರೆ.
ತಕ್ಷಣವೇ ಆತ ಆಭರಣವನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದಾನೆ. ಇದನ್ನು ನೋಡಿದ ವೃದ್ಧೆ ಇವರು ನಿಜವಾದ ಪೊಲೀಸರೆಂದೇ ಭಾವಿಸಿದ್ದಾಳೆ. ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಕಳ್ಳರು, ನಿಮ್ಮ ಚಿನ್ನವನ್ನು ಬಿಚ್ಚಿಕೊಡಿ ಕವರ್ನಲ್ಲಿ ಹಾಕಿಕೊಡುತ್ತೇವೆ ಎಂದು ಹೇಳಿ ಚಿನ್ನದ ಬದಲು ಕಲ್ಲುಗಳನ್ನು ತುಂಬಿ ವೃದ್ಧೆಗೆ ನೀಡಿದ್ದಾರೆ. ಮನೆಗೆ ಬಂದ ವೃದ್ಧೆ ಕವರ್ ಬಿಚ್ಚಿ ನೋಡಿದಾಗ ಚಿನ್ನದ ಸರದ ಬದಲಿಗೆ ಸಣ್ಣ ಕಲ್ಲುಗಳು ಕಂಡಿವೆ.