ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ನಂದಿಬೆಟ್ಟದ ತಪ್ಪಲಲ್ಲಿರುವ 900 ವರ್ಷಗಳ ಪುರಾತನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ಕಳ್ಳತನ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿಯ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ 900 ವರ್ಷಗಳ ಇತಿಹಾಸವಿದ್ದು, ನಂದಿಬೆಟ್ಟದ ಬುಡದಲ್ಲಿ ಈ ದೇವಸ್ಥಾನ ನಂದಿ ದೇವಸ್ಥಾನದಷ್ಟೇ ಹೆಸರುವಾಸಿಯಾಗಿದೆ.
ನಿನ್ನೆ ರಾತ್ರಿ ದುಷ್ಕರ್ಮಿಗಳು ದೇವಸ್ಥಾನದ ಬಾಗಿಲಿನ ಬೀಗ ಮರಿದು ಕಳ್ಳತನ ಕೃತ್ಯ ನಡೆಸಿದ್ದಾರೆ. ಬೆಳಗ್ಗೆ ಪೂಜೆ ಮಾಡಲು ದೇವಸ್ಥಾನಕ್ಕೆ ಪೂಜಾರಿ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ದೇವಸ್ಥಾನದಲ್ಲಿ ಕಳ್ಳತನವಾಗಿರುವ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ತಿಳಿದು ಬಂದಿಲ್ಲ. ಕಳ್ಳತನ ಕೃತ್ಯಕ್ಕೆ ಬಳಸಿದ ವಸ್ತುಗಳು ಮತ್ತು ಬೈಕ್ ಅನ್ನು ಬೆಟ್ಟದ ಬಳಿಯಲ್ಲಿರುವ ಗ್ಯಾರೇಜ್ ಬಳಿ ಬಿಟ್ಟು ಕಳ್ಳರು ಪರಾರಿ ಆಗಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ರೈತರ ಕುರಿ, ಮೇಕೆ ಕಳ್ಳತನ, ತೋಟಗಳಲ್ಲಿ ಪಂಪ್ಸೆಟ್ ಕಳ್ಳತನ, ಶಾಲೆಗಳಲ್ಲಿ ಸಿಲಿಂಡರ್ ಕಳ್ಳತನ ಕೇಸ್ಗಳು ದಾಖಲಾಗುತ್ತಿವೆ. ಕಳ್ಳರನ್ನು ಹಿಡಿದು ಕಳ್ಳತನ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಕಳ್ಳತನ: ಅಂತಾರಾಜ್ಯ ಕಳ್ಳಿ ಬಂಧನ