ದೊಡ್ಡಬಳ್ಳಾಪುರ: 1993ರಲ್ಲಿ ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಕಾರ್ಯದಲ್ಲಿ ದೊಡ್ಡಬಳ್ಳಾಪುರದಿಂದ ತೆರಳಿದ್ದ 12 ಕರ ಸೇವಕರ ಪೈಕಿ ಯುವಕನೋರ್ವ ಗೋಲಿಬಾರ್ನಲ್ಲಿ ಬಲಿಯಾಗಿದ್ದ. ರಾಮಮಂದಿರದ ಶಿಲಾನ್ಯಾಸವಾದ ಇಂದು ಅಗಲಿದ ಕರಸೇವಕನ ಸ್ಮರಣಾರ್ಥ ಕಾರ್ಯಕ್ರಮ ನಡೆಯಲಿದೆ.
ಹಿಂದೂ ಜಾಗರಣಾ ವೇದಿಕೆ ತಾಲೂಕಿನಾದ್ಯಂತ 20 ವೃತ್ತಗಳಲ್ಲಿ ಪೂಜೆ ಸಲ್ಲಿಸುವ ಮೂಲಕ 1,000ಕ್ಕೂ ಹೆಚ್ಚು ಲಾಡು ಹಂಚುವ ಕಾರ್ಯಕ್ಕೆ ಮುಂದಾಗಿದೆ. 12 ಕರಸೇವಕರ ತಂಡದಲ್ಲಿ ತಾಲೂಕಿನ ಮಂಡಿ ಬ್ಯಾಡರಹಳ್ಳಿ ವಿ.ಸತೀಶ್ ಸಹ ಒಬ್ಬರು. 1993ರಲ್ಲಿ ಅಯೋಧ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಕಟ್ಟೆಚ್ಚರ ವಹಿಸಿತ್ತು.
ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಸತೀಶ್ ಬಾಬರಿ ಮಸೀದಿ ಧ್ವಂಸ ಕಾರ್ಯದಲ್ಲಿ ಕರಸೇವಕರ ಜೊತೆಯಾದರು. ಈ ಸಮಯದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಬಲಿಯಾಗುತ್ತಾರೆ. ಬಳಿಕ ಅವರ ದೇಹವೂ ಸಹ ಸಿಗುವುದಿಲ್ಲ. ಪೊಲೀಸರ ಗುಂಡಿಗೆ ಬಲಿಯಾದ ಸತೀಶ್ ಮೃತದೇಹ ಸರಯೂ ನದಿಯಲ್ಲಿ ಕೊಚ್ಚಿ ಹೋಯಿತೆಂದು ಅವರ ಜೊತೆಗಾರರು ಹೇಳುತ್ತಾರೆ.
ಚಿಗುರು ಮೀಸೆಯ ಯುವಕ ಕೇವಲ ಕರ ಸೇವಕನಾಗಿರದೆ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟುವಾಗಿ ಸಾಧನೆ ಹಾದಿಯಲ್ಲಿ ಸಾಗುತ್ತಿದ್ದ. ಬದುಕಿ ಬಾಳಬೇಕಿದ್ದ ಆ ತರುಣ ಅಂದು ರಾಮಮಂದಿರಕ್ಕಾಗಿ ತನ್ನ ಪ್ರಾಣವನ್ನೆ ಬಲಿ ನೀಡಿದ್ದ. ಆದರೆ, ಗೋಲಿಬಾರಿನಲ್ಲಿ ಅವರ ಮೃತದೇಹ ದೊರೆಯದ ಕಾರಣ ಅವರ ಕುಟುಂಬ ಮತ್ತಷ್ಟು ನೋವಿಗೆ ಜಾರಿತ್ತು. ಅವನು ಸತ್ತಿಲ್ಲ, ಯಾವುದೇ ರೂಪದಲ್ಲಾದರು ಬಂದೇ ಬರುತ್ತಾನೆ ಎಂಬ ಆಸೆಯಿಂದ ಕುಟುಂಬ ನಿರೀಕ್ಷೆ ಕಂಗಳಿಂದ ಕಾಯುತ್ತಿದೆ.