ದೊಡ್ಡಬಳ್ಳಾಪುರ : ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನ ತರಗತಿಯಿಂದ ಹೊರಗೆ ಕೂರಿಸಿ ಪೋಷಕರಿಂದ ಶುಲ್ಕ ವಸೂಲಿಗೆ ಜ್ಞಾನಗಂಗಾ ವಿದ್ಯಾಸಂಸ್ಥೆ ಮುಂದಾಗಿತ್ತು. ಈ ಕುರಿತು ಈಟಿವಿ ಭಾರತ ವರದಿ ಮಾಡಿದ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಗೆ ನೀಡಿರುವ ಅನುಮತಿಯನ್ನ ಏಕೆ ಹಿಂತೆಗೆದುಕೊಳ್ಳಬಾರದು ಎಂಬುದರ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ತಾಲೂಕಿನ ಕೊಡಿಗೆಹಳ್ಳಿಯ ಜ್ಞಾನಗಂಗಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಪ್ರೌಢಶಾಲೆಯ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎರಡು ವರ್ಷದಿಂದ ಶಾಲಾ ಶುಲ್ಕ ಪಾವತಿ ಮಾಡಿರಲಿಲ್ಲ.
ಪೋಷಕರಿಗೆ ಸಾಕಷ್ಟು ಬಾರಿ ಫೋನ್ ಮಾಡಿ ಮನವಿ ಮಾಡಿದರೂ ಶುಲ್ಕ ಪಾವತಿಸದ ಹಿನ್ನೆಲೆ ಶಾಲಾ ಆಡಳಿತ ಮಂಡಳಿ 80 ವಿದ್ಯಾರ್ಥಿಗಳನ್ನ ತರಗತಿಯಿಂದ ಹೊರಗೆ ಕೂರಿಸಿ ಅಲ್ಲಿಯೇ ಶಿಕ್ಷಕರಿಂದ ಬೋಧನೆ ಮಾಡಿಸಿತ್ತು.
ಈ ಕುರಿತು ಈಟಿವಿ ಭಾರತನಲ್ಲಿ ಸೆಪ್ಟೆಂಬರ್ 23 ರಂದು "ಶುಲ್ಕ ಕಟ್ಟದ ವಿದ್ಯಾರ್ಥಿಗಳು ತರಗತಿಯಿಂದ ಹೊರಗೆ ಕೂರಿಸಿದ ವಿದ್ಯಾಸಂಸ್ಥೆ" ಎಂಬ ಸುದ್ದಿ ಪ್ರಸಾರ ಮಾಡಲಾಗಿತ್ತು. ಸುದ್ದಿ ಪ್ರಸಾರದಿಂದ ಎಚ್ಚೆತ್ತ ದೊಡ್ಡಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದ ಸಮಯದಲ್ಲಿ ಮಕ್ಕಳಿಗೆ ಶಾಲಾ ಆವರಣದಲ್ಲಿ ದೈಹಿಕ ಮತ್ತು ಮಾನಸಿಕ ಶಿಕ್ಷೆ ವಿಧಿಸಿರುವುದು ಗಮನಕ್ಕೆ ಬಂದಿದೆ. ದಾಖಲೆಗಳನ್ನ ಪರಿಶೀಲಿಸಿದಾಗ, ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಮತ್ತು ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯದಿರುವುದು ಗಮನಕ್ಕೆ ಬಂದಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕರ್ನಾಟಕ ಶಿಕ್ಷಣ ಸಂಸ್ಥೆಗಳು(ಪ್ರಾಥಮಿಕ/ಪ್ರೌಢಶಿಕ್ಷಣ) ಮ್ಯಾನತೆ ನಿಯಮಗಳು 1999ರ ನಿಯಮ-3(1)ರಂತೆ ಶಾಲೆ ನಡೆಸಲು ನೀಡಿರುವ ನಿಯಮಗಳ ಉಲ್ಲಂಘನೆ ಮತ್ತು ಭಾರತ ಸರ್ಕಾರದ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009ರ ಅಧ್ಯಾಯ-4ರ ಸೆಕ್ಷನ್-17(1) ಅನ್ನು ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಈ ನಿಯಮಗಳ ಉಲ್ಲಂಘನೆ ಕಾರಣದಿಂದ ತಮಗೆ ಶಾಲೆ ನಡೆಸಲು ನೀಡಲಾಗಿರುವ ಅನುಮತಿಯನ್ನು ಏಕೆ ಹಿಂತೆಗೆದುಕೊಳ್ಳಬಾರದು ಎಂಬುದರ ಬಗ್ಗೆ ಕಾರಣ ಕೇಳಿ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ.
ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನ ತರಗತಿಯಿಂದ ಹೊರಗೆ ಕೂರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಈಗಾಗಲೇ ಡಿಡಿಪಿಐಗೆ ಸೂಚನೆ ನೀಡಲಾಗಿದೆ. ಸೂಕ್ತ ಕ್ರಮ ತೆಗೆದುಕೊಂಡು ವರದಿ ನೀಡುವಂತೆ ಸೂಚಿಸಲಾಗಿದೆ. ಶುಲ್ಕವನ್ನ ಬಲವಂತವಾಗಿ ತೆಗೆದುಕೊಳ್ಳಬಾರದು. ಒಂದು ವೇಳೆ ಬಲವಂತ ಮಾಡಿದ್ದಲ್ದಿ ಶಾಲೆಯ ಅನುಮತಿ ರದ್ದು ಮಾಡುಲಂತೆ ಶಿಫಾರಸು ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.