ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಗ್ರಾಮದೊಳಕ್ಕೆ ಹೆಬ್ಬಾವು ಬಂದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆಬ್ಬಾವು ಊರಿನತ್ತ ಬಂದಿದೆ. ಊರಿನೊಳಗೆ ಬಂದ ಹೆಬ್ಬಾವು ಸಂರಕ್ಷಣೆ ಮಾಡಿದ ಗ್ರಾಮಸ್ಥರು ಅದನ್ನು ಮತ್ತೆ ಕಾಡಿಗೆ ಬಿಟ್ಟಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಹೆಬ್ಬಾವು ಪ್ರತ್ಯಕ್ಷಗೊಂಡಿದ್ದು, ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ. ಹುಲಿಕುಡಿ ಬೆಟ್ಟದ ಸುತ್ತಮುತ್ತಲಿನ 16ಕ್ಕೂ ಹೆಚ್ಚು ಕೆರೆಗಳು ತುಂಬಿ ಹರಿಯುತ್ತಿವೆ. ಹೀಗಾಗಿ ನೀರಿನ ರಭಸಕ್ಕೆ ಹೆಬ್ಬಾವು ಗ್ರಾಮದತ್ತ ಬಂದಿರಬಹುದು ಎನ್ನಲಾಗಿದೆ.
ಇಂದು ಬೆಳಗ್ಗೆ ಗ್ರಾಮದ ದೊಡ್ಡಹನುಮಂತಪ್ಪನವರ ಹೊಲದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಸುಮಾರು 10 ಅಡಿ ಉದ್ದದ ಹೆಬ್ಬಾವು ಇದಾಗಿದ್ದು, ಹೆಬ್ಬಾವನ್ನು ನೋಡಲು ಗ್ರಾಮಸ್ಥರು ಮುಗಿಬಿದ್ದರು. ಕೊನೆಗೆ ಹಾವನ್ನು ಸಂರಕ್ಷಣೆ ಮಾಡಿದ ಗ್ರಾಮಸ್ಥರು ಕಾಡಿಗೆ ಬಿಟ್ಟಿದ್ದಾರೆ.
ಇದನ್ನೂ ಓದಿ: ಶಾಲಾ ಬಸ್ನಲ್ಲಿ ಅಡಗಿ ಕುಳಿತಿದ್ದ ದೈತ್ಯ ಗಾತ್ರದ ಹೆಬ್ಬಾವು: ವಿಡಿಯೋ ವೈರಲ್