ನೆಲಮಂಗಲ : ಕರ್ನಾಟಕದ 17 ಜಿಲ್ಲೆಗಳಲ್ಲಿ ಪ್ರವಾಹ ಬಂದು ಜನರ ಬದುಕು ಅತಂತ್ರವಾಗಿದೆ. ಪ್ರವಾಹದಿಂದ ಮನೆ ಜಮೀನು ಕಳೆದುಕೊಂಡಿರುವ ಉತ್ತರ ಕರ್ನಾಟಕದ ಜನತೆ ಒಂದೊತ್ತಿನ ಊಟಕ್ಕೂ ಪರದಾಡಬೇಕಾದ ಸ್ಥಿತಿ ಎದುರಾಗಿದೆ. ಪ್ರವಾಹ ಸಂತ್ರಸ್ತರ ನೆರವಿಗೆ ಇಡೀ ಕರ್ನಾಟಕವೇ ಧಾವಿಸಿದೆ. ಹಾಗೆಯೇ ನೆಲಮಂಗಲದ ತ್ಯಾಮಗೊಂಡ್ಲು ಜನತೆ ಸಹ ಪ್ರವಾಹ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿ ಎಲ್ಲವನ್ನೂ ತಾವೇ ಅಲ್ಲಿಗೆ ಹೋಗಿ ಹಂಚಿ ನೆರವಾಗಿದ್ದಾರೆ.
ತ್ಯಾಮಗೊಂಡ್ಲು ನಾಗರಿಕ ಸಮಿತಿಯಿಂದ ಉತ್ತರ ಕರ್ನಾಟಕ ಜನತೆಗೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸಿ ಆ ವಸ್ತುಗಳನ್ನ ತಾವೇ ಅಲ್ಲಿಗೆ ತೆಗೆದುಕೊಂಡು ಹೋಗಿ ನಿಜವಾದ ಸಂತ್ರಸ್ತರಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ. ದಿನಾಂಕ 20 ರಂದು ತ್ಯಾಮಗೊಂಡ್ಲು ಪಟ್ಟಣದಲ್ಲಿ ಮೆರವಣಿಗೆ ಮೂಲಕ ಪ್ರವಾಹ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಸ್ವಯಂ ಸೇವಕರು ಮುಂದಾದರು.
ಹೀಗೆ ಸಂಗ್ರಹವಾದ ವಸ್ತುಗಳನ್ನು ಹಳದಿ ಚೀಲ ಮತ್ತು ಗುಲಾಬಿ ಚೀಲಗಳನ್ನಾಗಿ ಬೇರ್ಪಡಿಸಿ, ಹಳದಿ ಬಣ್ಣದ ಚೀಲದಲ್ಲಿ ಬಟ್ಟೆ ಮತ್ತು ಅಡುಗೆ ಪಾತ್ರೆಗಳಾದ ಹೊದಿಕೆ, ಟವಲ್, ಸೀರೆ, ಅಂಗಿ, ಸ್ಟೀಲ್ ಬಟ್ಟಲು, ಅನ್ನದ ಕೈ, ಸೌಟು, ಮಗ್ , ಚಾಕು, ಒಳಗೊಂಡು ನೂರು ಚೀಲಗಳು. ಹಾಗೆಯೇ ಗುಲಾಬಿ ಬಣ್ಣದ ಚೀಲದಲ್ಲಿ, ದಿನಸಿ ಮತ್ತು ದಿನಬಳಕೆಯ ಸಾಮಗ್ರಿಗಳಾದ ಅಕ್ಕಿ, ಉಪ್ಪು, ಗೋದಿಹಿಟ್ಟು, ತೋಗರಿ ಬೆಳೆ, ಎಣ್ಣೆ, ಸಾಂಬರ್ ಪುಡಿ, ಸ್ನಾನದ ಸಾಬೂನು, ಬಟ್ಟೆ ಸಾಬೂನು, ಪೇಸ್ಟ್, ಶಾಂಪೂ, ನೀರಿನ ಬಾಟಲ್ ಒಳಗೊಂಡ ನೂರು ಚೀಲಗಳನ್ನು ಉತ್ತರ ಕರ್ನಾಟಕ್ಕೆ ಸಾಗಿಸಲು ಸಜ್ಜು ಮಾಡಿದರು.
ಪ್ರವಾಹ ಸಂತ್ರಸ್ತರು ಅಗತ್ಯ ಸಾಮಗ್ರಿ ಹಂಚುವ ಮುನ್ನ ಇಲ್ಲಿಯವರೆಗೂ ಯಾವುದೇ ರೀತಿಯ ಪರಿಹಾರ ಸಾಮಗ್ರಿ ಯಾವ ಊರಿಗೆ ತಲುಪಿಲ್ಲವೊ ಅಂತಹ ಗ್ರಾಮಕ್ಕೆ ತಾವು ಸಂಗ್ರಹಿಸಿದ ವಸ್ತುಗಳನ್ನು ಹಂಚುವ ತಿರ್ಮಾನ ಮಾಡಿದರು. ಹಾಗೆಯೇ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಮಳವಂಕಿ, ಉದಗಟ್ಟಿ, ತಳಕಟ್ಟನಾಳ, ಅಡವಟ್ಟಿ ಗ್ರಾಮಗಳಿಗೆ ತಾವು ಸಂಗ್ರಹಿಸಿದ ವಸ್ತುಗಳನ್ನು ಹಂಚಿದ್ದಾರೆ.