ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿ ಗ್ರಾಮದ ಸತ್ಯಮ್ಮ ಮತ್ತು ಈಶ್ವರ ದೇವಸ್ಥಾನದ ಹುಂಡಿ ಹಣ ಕಳ್ಳತನವಾಗಿದೆ. ಮೂರು ತಿಂಗಳ ಅಂತರದಲ್ಲಿ ಎರಡು ದೇವಸ್ಥಾನಗಳಲ್ಲಿ ಮೂರನೇ ಬಾರಿ ಕಳ್ಳತನ ಕೃತ್ಯ ನಡೆದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಕಳೆದ ರಾತ್ರಿ ಕಳ್ಳತನ ಕೃತ್ಯ ನಡೆದಿದೆ. ದೇವಸ್ಥಾನದ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಕಾಣಿಕೆ ಹುಂಡಿಯನ್ನು ಹೊತ್ತೊಯ್ದು ಪಕ್ಕದ ನೀಲಗಿರಿ ತೋಪಿನಲ್ಲಿ ಹುಂಡಿ ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ. 15 ದಿನಗಳ ಹಿಂದೆ ಸಹ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, 3 ಸಾವಿರ ಹಣ ಕದ್ದೊಯ್ದಿದ್ದರು. ಮೂರು ತಿಂಗಳ ಹಿಂದೆ ಸಹ ಎರಡು ದೇವಸ್ಥಾನಗಳಲ್ಲಿ ಕಳ್ಳತನ ನಡೆದಿತ್ತು. ದುಷ್ಕರ್ಮಿಗಳು ದೇವರ ಮೈಮೇಲಿದ್ದ 15 ತಾಳಿಗಳು, ಹುಂಡಿ ಹಣ ಎಗರಿಸಿದ್ದರು. ಅಲ್ಲದೇ ಪಕ್ಕದಲ್ಲಿರುವ ಚೌಡೇಶ್ವರಿ ದೇವಿ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸರಗಳ್ಳನ, ದೇವಾಲಯ ಕಳವು, ಜಾನುವಾರು ಕಳವು ಹಾಗೂ ಅಡ್ಡಗಟ್ಟಿ ದರೋಡೆ ಮಾಡುವಂತ ಪ್ರಕರಣಗಳು ಹೆಚ್ಚುತ್ತಿವೆ. ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದರೂ ಕಳ್ಳರಿಗೆ ಕಡಿವಾಣ ಹಾಕುವ ಪ್ರಯತ್ನ ಪೊಲೀಸ್ ಇಲಾಖೆಯಿಂದ ನಡೆಯುತ್ತಿಲ್ಲ. ಪೊಲೀಸರ ನಿರ್ಲಕ್ಷ್ಯವೇ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಜನ ದೂರಿದ್ದಾರೆ.
(ಓದಿ: ಕಾಲಿಟ್ಟಲ್ಲೆಲ್ಲಾ ಕೈಚಳಕ.. ಬೀದರ್ನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಮಹಿಳೆ)