ದೊಡ್ಡಬಳ್ಳಾಪುರ: ಎರಡು ಪೊಲೀಸ್ ಠಾಣಾ ಸರಹದ್ದುಗಳ ಮಧ್ಯೆ, ಟಾಟಾಏಸ್ ಚಾಲಕನ ಕೊಲೆಯಾಗಿದೆ. ಆದರೆ, ಎರಡು ಠಾಣೆಗಳ ಪೊಲೀಸರು ತಮ್ಮ ಸರಹದ್ದಿಗೆ ಸೇರಿಲ್ಲವೆಂದು ಕಿತ್ತಾಡಿದ್ದಾರೆ. ಇದರಿಂದ ಚಾಲಕನ ಶವ ಟಾಟಾ ಏಸ್ ವಾಹನದಲ್ಲಿಯೇ ಉಳಿದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಅಪ್ಪಕಾರನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಇಂದು ಮುಂಜಾನೆ ಟಾಟಾ ಏಸ್ ವಾಹನ ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಲಕನ ಕೊಲೆ ಮಾಡಿದ್ದಾರೆ. ಆದರೆ, ಕೊಲೆ ವಿಚಾರಣೆ ನಡೆಸಲು ಠಾಣಾ ಸರಹದ್ದು ಗೊಂದಲ, ಎರಡು ಠಾಣೆ ಪೊಲೀಸರ ಕಿತ್ತಾಟಕ್ಕೆ ಕಾರಣವಾಗಿದೆ.
ಘಟನೆ ನಡೆದಿರುವುದು ದೊಡ್ಡಬೆಳವಂಗಲ ಠಾಣಾ ವ್ಯಾಪ್ಯಿ ಅಥವಾ ತ್ಯಾಮಗೊಂಡ್ಲು ಠಾಣೆಯಾ ಎನ್ನುವುದು ಪೊಲೀಸರಿಗೆ ಗೊಂದಲ ಉಂಟು ಮಾಡಿದೆ. ಎರಡು ಠಾಣೆಗಳ ಗಡಿರೇಖೆಯ ಗೊಂದಲದಿಂದ ಎರಡು ಠಾಣೆಯ ಪೊಲೀಸರ ನಡುವೆ ವಾಗ್ವಾದವಾಗಿದೆ.
ಇದರಿಂದ ಚಾಲಕನ ಶವ ಟಾಟಾ ಏಸ್ ವಾಹನದಲ್ಲಿಯೇ ಉಳಿದಿದೆ. ಗಡಿರೇಖೆ ಗುರುತಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗಾಗಿ ಪೊಲೀಸರು ಕಾದು ಕುಳಿತಿದ್ದು, ಪೊಲೀಸರ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಲೆಯಾದ ವ್ಯಕ್ತಿ ಯಲಹಂಕದ ಪುಟ್ಟೆನಹಳ್ಳಿ ನಿವಾಸಿ. ಕೆಎ 07 ಎ 6008 ಸಂಖ್ಯೆಯ ಟಾಟಾ ಏಸ್ ವಾಹನದಲ್ಲಿ ಕೊಲೆ ಮಾಡಲಾಗಿದ್ದು, ಚಾಲಕ ತನ್ನ ಸೀಟ್‌ನಲ್ಲಿ ಕುಳಿತಿದ್ದ ಜಾಗದಲ್ಲಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.