ನೆಲಮಂಗಲ: ತ್ಯಾಮಗೊಂಡ್ಲು ಗ್ರಾಮ ಪಂಚಾಯತ್ಅನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಬೇಕೆಂದು ಪಟ್ಟು ಹಿಡಿದಿರುವ ಗ್ರಾಮಸ್ಥರು, ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಗ್ರಾಮದಿಂದ ಯಾರೂ ನಾಮಪತ್ರ ಸಲ್ಲಿಸದೆ ಚುನಾವಣೆಗೆ ಬಹಿಷ್ಕಾರ ಹಾಕಿ ಸರ್ಕಾರಕ್ಕೆ ತಮ್ಮ ಬೇಡಿಕೆ ಸಲ್ಲಿಸಿದ್ದಾರೆ.
ತಾಲೂಕಿನ ಪ್ರಮುಖ ದಾಬಸ್ ಪೇಟೆ ಕೈಗಾರಿಕಾ ಪ್ರದೇಶದ ಸಮೀಪವೇ ಇರುವ ತ್ಯಾಮಗೊಂಡ್ಲು ದಿನೇ ದಿನೆ ಬೆಳೆಯುತ್ತಿದೆ. ಪಟ್ಟಣ ಪಂಚಾಯತ್ ಆಗುವ ಎಲ್ಲಾ ಅರ್ಹತೆ ಈ ಪಟ್ಟಣಕ್ಕೆ ಇದೆ. ಹೀಗಿದ್ದರೂ ಇಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಮಾಡಲಾಗಿದೆ. ಹೀಗಾಗಿ ಗ್ರಾಮಸ್ಥರು ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸದೆ ಬಹಿಷ್ಕರಿಸಿದ್ದಾರೆ. ಇಲ್ಲಿನ ಗ್ರಾಮ ಪಂಚಾಯತ್ನಲ್ಲಿ 21 ಸ್ಥಾನಗಳಿದ್ದು, ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಯಾರೂ ನಾಮಪತ್ರ ಸಲ್ಲಿಸದೆ ಪಟ್ಟಣ ಪಂಚಾಯತ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದರೆ ಜನ ವಿರೋಧಿ ಕಾಯ್ದೆಗಳು ವಜಾ: ಡಿಕೆಶಿ
1920ರಿಂದ 1986ರವರೆಗೂ ತ್ಯಾಮಗೊಂಡ್ಲು ಪುರಸಭೆಯಾಗಿತ್ತು. ನಂತರ 1986ರಿಂದ 1993ರವರೆಗೂ ಪಟ್ಟಣ ಪಂಚಾಯತ್ ಆಗಿತ್ತು. ನಂತರ ಗ್ರಾಮ ಪಂಚಾಯತ್ ಆಗಿ ಹಿಂಬಡ್ತಿ ಪಡೆಯುವ ಮೂಲಕ ಸಾಕಷ್ಟು ಹಿಂದುಳಿದಿದೆ. 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣವನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಬೇಕು. ತ್ಯಾಮಗೊಂಡ್ಲು ಪಟ್ಟಣದಲ್ಲಿ 10 ಸಾವಿರ ಜನಸಂಖ್ಯೆ ಇದ್ದು, 2016ರಲ್ಲಿಯೇ ಪಟ್ಟಣ ಪಂಚಾಯತ್ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ತ್ಯಾಮಗೊಂಡ್ಲು ಪಂಚಾಯತ್ ಮಾತ್ರ ಮೇಲ್ದರ್ಜೆಗೆ ಏರಿರಲಿಲ್ಲ. ಇದರಿಂದ ಅಕ್ರೋಶಗೊಂಡಿರುವ ಗ್ರಾಮಸ್ಥರು ಪಂಚಾಯತ್ ಚುನಾವಣೆಗೆ ಬಹಿಷ್ಕಾರ ಹಾಕಿದ್ದಾರೆ.