ಬೆಂಗಳೂರು: ಮೆಟ್ರೋ ಕಾಮಗಾರಿಗೆ ಅಡ್ಡಿಯಾಗಿರುವ ಮರಗಳನ್ನು ಕಡಿಯುವ ಮೊದಲು ಅವುಗಳನ್ನು ರಕ್ಷಿಸಲು ಇರುವ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮರ ಸಂರಕ್ಷಣಾ ವಿಶೇಷ ಸಮಿತಿಗೆ ಹೈಕೋರ್ಟ್ ನಿರ್ದೇಶಿಸಿದೆ.
ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ನೂರಾರು ಮರಗಳನ್ನು ಕತ್ತರಿಸಲಾಗುತ್ತಿದೆ ಎಂದು ಆರೋಪಿಸಿ ದತ್ತಾತ್ರೇಯ ಟಿ. ದೇವರೆ ಮತ್ತು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಬಿಬಿಎಂಪಿ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ನಗರದಲ್ಲಿರುವ ಮರಗಳ ಗಣತಿ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಮರ ಗಣತಿ ಕಾರ್ಯ ವಿಳಂಬ ಮಾಡಿದ ವಿಚಾರವಾಗಿ ಮರ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ದಾಖಲಿಸಲು ಉದ್ದೇಶಿದ್ದ ನ್ಯಾಯಾಂಗ ನಿಂದನೆ ಕ್ರಮವನ್ನು ಪೀಠ ತಾತ್ಕಾಲಿಕವಾಗಿ ಮುಂದೂಡಿತು. ಪ್ರಾಧಿಕಾರವು ಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ಕ್ರಮಗಳನ್ನು ಪರಿಶೀಲಿಸಿ ಈ ವಿಚಾರವಾಗಿ ಕ್ರಮ ಜರುಗಿಸುವ ಕುರಿತು ನಿರ್ಧರಿಸಲಿದ್ದೇವೆ ಎಂದು ತಿಳಿಸಿ ವಿಚಾರಣೆಯನ್ನು ಏ. 16ಕ್ಕೆ ಮುಂದೂಡಿತು.
ಇದೇ ವೇಳೆ ಮೆಟ್ರೋ ಕಾಮಗಾರಿಗೆ ಅಡ್ಡಿಯಾಗಿರುವ ಮರಗಳನ್ನು ಕಡಿಯುವ ವಿಚಾರ ಪ್ರಸ್ತಾಪಿಸಿ, ಯೋಜನೆಗೆ ಅಡ್ಡಿಯಾಗಿರುವ ಮರಗಳನ್ನು ಕಡಿಯುವ ಮುನ್ನ ಮರ ಸಂರಕ್ಷಣಾ ಸಮಿತಿ ಸ್ಥಳ ಪರಿಶೀಲಿಸಬೇಕು. ಮೆಟ್ರೋ ಅಧಿಕಾರಿಗಳು ಮರಗಳನ್ನು ಕಡಿಯಲು ಅನುಮತಿ ಕೋರಿ ಸಲ್ಲಿಸಿರುವ ಪ್ರತಿ ಅರ್ಜಿಯನ್ನು ಮರ ಸಂರಕ್ಷಣಾ ವಿಶೇಷ ಸಮಿತಿ ವಿಚಾರಣೆ ಮಾಡಬೇಕು. ಮೆಟ್ರೋ ಕಾಮಗಾರಿಯ ನಕಾಶೆ ಮತ್ತು ಸ್ಥಳ ಎರಡನ್ನೂ ಕೂಲಕಂಶವಾಗಿ ಪರಿಶೀಲಿಸಿ, ಕಾಮಗಾರಿಯ ಹೊರತಾಗಿಯೂ ಸಂರಕ್ಷಣೆ ಮಾಡಲು ಸಾಧ್ಯವಿರುವ ಮರಗಳನ್ನು ಗುರುತಿಸಿ ಅವುಗಳ ರಕ್ಷಣೆಗೆ ಬಿಬಿಎಂಪಿಗೆ ತಿಳಿಸಬೇಕು. ಕಡಿಯಲೇ ಬೇಕಾದ ಮರಗಳ ಕುರಿತು ವಿಶೇಷ ಸಮಿತಿ ಅನುಮೋದಿಸಿದ ನಂತರವೇ ಬಿಬಿಎಂಪಿ ಅರಣ್ಯ ಇಲಾಖೆ ಅಧಿಕಾರಿಗಳು ಮರ ಕಡಿಯಲು ಅನುಮತಿ ನೀಡಬೇಕು ಎಂದು ಪೀಠ ನಿರ್ದೇಶಿಸಿತು.