ಆನೇಕಲ್: ಇದೇ ಮೊದಲ ಬಾರಿಗೆ ಸದರ್ನ್ ಬರ್ಡ್ ವಿಂಗ್ ಅಥವಾ ಸಹ್ಯಾದ್ರಿ ಬರ್ಡ್ ವಿಂಗ್ ಚಿಟ್ಟೆಯ ತಳಿಯನ್ನು ಎಂಟೋಮಾಲಜಿಸ್ಟ್ ಲೋಕನಾಥ್ ನೇತೃತ್ವದಲ್ಲಿ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲಾಯಿತು.
ಬನ್ನೇರುಘಟ್ಟ ಚಿಟ್ಟೆ ವನದ ಗೋಪುರದೊಳಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹಸ್ತದಿಂದ 2017ರಲ್ಲಿ ಕರ್ನಾಟಕ ರಾಜ್ಯ ಚಿಟ್ಟೆಯೆಂದೇ ಗುರ್ತಿಸಲ್ಪಟ್ಟ ಸದರ್ನ್ ಬರ್ಡ್ ವಿಂಗ್ ಚಿಟ್ಟೆಯನ್ನು ಬಿಡುಗಡೆಗೊಳಿಸಲಾಯಿತು.
ಕರ್ನಾಟಕ ರಾಜ್ಯ ಬಾವುಟದ ಹಳದಿ ಬಣ್ಣದ ರೆಕ್ಕೆಗಳನ್ನು ಹೊಂದಿರುವ ಅಪರೂಪದ ಚಿಟ್ಟೆ ಇದಾಗಿರುವುದರಿಂದ ರಾಜ್ಯ ಸರ್ಕಾರ ಸದರ್ನ್ ಬರ್ಡ್ ವಿಂಗ್ ಚಿಟ್ಟೆಯನ್ನು ರಾಜ್ಯ ಚಿಟ್ಟೆಯೆಂದು 2017ರಲ್ಲಿ ಘೋಷಿಸಿತ್ತು. ಇದೀಗ ಚಿಟ್ಟೆ ವನದ ಲೋಕನಾಥ್ ಮತ್ತು ಸಿಬ್ಬಂದಿ ಪರಿಶ್ರಮದಿಂದ ಮೊದಲ ಬಾರಿಗೆ ಪ್ರಯೋಗಾರ್ಥವಾಗಿ ರಾಜ್ಯ ಚಿಟ್ಟೆ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ.
ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಯುವ ಮನಸ್ಸುಗಳಿಗೆ ರಾಜ್ಯ ಚಿಟ್ಟೆಯ ಪರಿಕಲ್ಪನೆ, ಸಂರಕ್ಷಣೆ ಕುರಿತು ಕಾರ್ಯಾಗಾರ ನಡೆಸಿ ಚಿಟ್ಟೆ ಅಭಿವೃದ್ಧಿ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಯೋಜನೆ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಹಣಾ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.