ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಐರಾವತ ಬಸ್ ಮತ್ತು ಎರಡು ಲಾರಿಗಳ ನಡುವೆ ಸರಣಿ ಅಪಘಾತ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಬಳಿ ಘಟನೆ ಘಟನೆ ನಡೆದಿದ್ದು ಪೆಟ್ರೋಲ್ ತುಂಬಿದ ಲಾರಿ, ಕಟ್ಟಿಗೆ ಲಾರಿ ಹಾಗೂ ಐರಾವತ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಬೆಂಗಳೂರಿನ ಶಾಂತಿನಗರದಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಬಸ್ ಮತ್ತು ಬೆಂಗಳೂರು-ತುಮಕೂರು ಮಾರ್ಗವಾಗಿ ಚಲಿಸುತ್ತಿದ್ದ ಎರಡು ಲಾರಿನಗಳ ನಡುವೆ ಅಪಘಾತ ನಡೆದಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೆಟ್ರೋಲ್ ತುಂಬಿದ್ದ ಲಾರಿಯಲ್ಲಿದ್ದ ಇಬ್ಬರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಕಟ್ಟಿಗೆ ತುಂಬಿದ್ದ ಲಾರಿ ಚಾಲಕ ಲಾರಿಯಲ್ಲಿ ಸಿಲುಕಿ ನರಳಾಡುತ್ತಿದ್ದ ದೃಶ್ಯ ಕಂಡು ಬಂತು. ಪೀಣ್ಯ ಹಾಗೂ ರಾಜಾಜಿನಗರ ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೆರವಿನಿಂದ 2 ಗಂಟೆಗಳ ಕಾರ್ಯಾಚರಣೆ ನಡೆಸಿ ಚಾಲಕನ ರಕ್ಷಣೆ ಮಾಡಲಾಗಿದೆ. ಚಾಲಕ ಕೋಲಾರದ ಬ್ಯಾತಮಂಗಲದ ಸುಧಾಕರ್ ಎಂದು ತಿಳಿದು ಬಂದಿದೆ. ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಲಾರಿಯಲ್ಲಿ ಪೆಟ್ರೋಲ್ ಸೋರುತ್ತಿರುವ ಹಿನ್ನೆಲೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.