ನೆಲಮಂಗಲ : ಕೊರೊನಾದಿಂದ ಕಂಗೆಟ್ಟಿದ್ದ ರೈತರನ್ನು ಇದೀಗ ಸೈನಿಕ ಹುಳುಗಳು ಕಾಡುತ್ತಿವೆ. ರೈತರು ಬೆಳೆದ ಮುಸುಕಿನ ಜೋಳದ ಮೇಲೆ ದಾಳಿ ಮಾಡಿರುವ ಸೈನಿಕ ಹುಳು ಬೆಳೆಯನ್ನು ಹಾಳು ಮಾಡುವ ಮೂಲಕ ರೈತರನ್ನ ಕಷ್ಟಕ್ಕೆ ದೂಡಿದೆ.
ತಾಲೂಕಿನ ಭಟ್ಟರಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಯಲ್ಲಿ ಸೈನಿಕ ಹುಳುವಿನ ಕಾಟ ಜೋರಾಗಿದೆ. ಹೈನುಗಾರಿಕೆ ಇಲ್ಲಿನ ರೈತರ ಪ್ರಮುಖ ಉದ್ಯಮ, ಹಸುಗಳ ಮೇವಿಗಾಗಿ ಇಲ್ಲಿನ ರೈತರು ಮುಸುಕಿನ ಜೋಳ ಬೆಳೆಯುತ್ತಾರೆ.
ಇದೀಗ ಮುಸುಕಿನ ಜೋಳದ ಮೇಲೆ ದಾಳಿ ನಡೆಸಿರುವ ಸೈನಿಕ ಹುಳು, ಬೆಳೆಯನ್ನು ಹಾಳು ಮಾಡುತ್ತಿವೆ. ಈ ಮೇವನ್ನು ತಿಂದ ಹಸುಗಳು ಅನಾರೋಗಕ್ಕೆ ತುತ್ತಾಗುತ್ತಿವೆ. ಹಾಗಾಗಿ ಮೇವನ್ನು ಹಸುಗಳಿಗೆ ಹಾಕಲು ರೈತರು ಭಯಪಡುತ್ತಿದ್ದಾರೆ.
ಸೈನಿಕ ಹುಳುವಿನ ನಿಯಂತ್ರಣ ಮಾಡಲು ಸಾಧ್ಯವಾಗದೆ ಕಂಗಲಾಗಿರುವ ರೈತರು ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸೈನಿಕ ಹುಳುವಿನ ನಿಯಂತ್ರಣಕ್ಕೆ ಮಾರ್ಗದರ್ಶನ ನೀಡಬೇಕು ಮತ್ತು ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.