ಬೆಂಗಳೂರು/ಆನೇಕಲ್: ಮಂಗಳವಾರ ರಾತ್ರಿ ರಾಜಧಾನಿ ವ್ಯಾಪ್ತಿಯಲ್ಲಿ ಸುರಿದ ಸಾಧಾರಣ ಮಳೆ ಹಲವು ಆವಾಂತರಗಳನ್ನು ಸೃಷ್ಟಿಸಿದೆ.
ಮಳೆಯ ಆರ್ಭಟಕ್ಕೆ ಬೇಗೂರು ವಾರ್ಡ್ನ ಕ್ಲಾಸಿಕ್ ಪ್ಯಾರಡೈಸ್ ಲೇಔಟ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಮಾರ್ಗದ ವಾಹನ ಸವಾರರು ಪರದಾಡುವಂತಾಗಿದೆ. ಬೇಸಿಗೆಯಲ್ಲಿ ಮಣ್ಣು, ಧೂಳಿನಿಂದ ತುಂಬಿರುವ ರಸ್ತೆ, ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿದೆ. ಕಾವೇರಿ ಪೈಪ್ಲೈನ್ಗಾಗಿ ರಸ್ತೆ ಕೆಳಭಾಗದಲ್ಲಿ ಪೈಪ್ ಹಾಕಲಾಗಿದ್ದು, ಕಾಮಗಾರಿ ಬಳಿಕ ಸಮರ್ಪಕವಾಗಿ ಮುಚ್ಚದ ಕಾರಣ ಸುರಿದ ಸಾಧಾರಣ ಮಳೆಗೆ ರಸ್ತೆಯಲ್ಲಿ ಬಿರುಕು ಬಿಟ್ಟಿದೆ.
ಕೆಸರು ಗದ್ದೆಯಂತಾದ ರಸ್ತೆಯಲ್ಲಿ ವಾಹನ ಸವಾರರು ಹಿಡಿಶಾಪ ಹಾಕುತ್ತಲೇ ಸಂಚಾರ ಮಾಡುತ್ತಿದ್ದಾರೆ. ಶಾಂತಿಪ್ರಿಯ, ನಂಜುಂಡಯ್ಯ, ಪಟೇಲ್ ಬಡಾವಣೆಗಳು ಸೇರಿದಂತೆ ಹಲವು ಬಡಾವಣೆಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನರು ಪರದಾಡುವಂತಾಯಿತು.
ಕೊಳಚೆ ನೀರು ಸಂಪ್ಗಳಿಗೆ ಸೇರಿದ್ದು, ಬಳಸಲು ನೀರಿಲ್ಲದೆ ತೊಂದರೆ ಅನುಭವಿಸುತ್ತಿದರು. ಶಾಂತಿಪ್ರಿಯ ಬಡಾವಣೆಯ ಮ್ಯಾನ್ಹೋಲ್ ಒಡೆದು ಚರಂಡಿ ನೀರು ಕಾರಂಜಿಯಂತೆ ಚಿಮ್ಮುತ್ತಿದೆ. ಇದುವರೆಗೂ ದುರಸ್ಥಿಕಾರ್ಯ ಕೈಗೊಂಡಿಲ್ಲ. ಇಡೀ ಬಡಾವಣೆಯಲ್ಲಿ ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಪಾಲಿಕೆ ಸದಸ್ಯ ಆಂಜನಪ್ಪ, ಎಇಇ ಅಶೋಕ್ ಕುಮಾರ್, ಜಲಮಂಡಳಿ ಎಂಜಿನಿಯರ್ ಮೋಹನ್ ಕುಮಾರ್ ಸಂತ್ರಸ್ತರ ಅಹವಾಲು ಆಲಿಸಿದರು.
‘ರಾಜಕಾಲುವೆಗಳ ಒತ್ತುವರಿ ಮಾಡಿಕೊಂಡಿದ್ದರಿಂದ ಕಾಲುವೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ. ಒತ್ತುವರಿದಾರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ನೀರು ಸರಾಗವಾಗಿ ಹರಿಯುವಂತೆ ಮಾಡುತ್ತೇವೆ. ಈ ಪ್ರದೇಶಗಳ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ವ್ಯನಸ್ಥೆ ಮಾಡಲಾಗುವುದು. ಸಾಂಕ್ರಮಿಕ ರೋಗ ಹರಡದಂತೆ ತಡೆಯಲು ಔಷಧಿ ಸಿಂಪರಣೆ ಮಾಡಲು ಸೂಚಿಸಲಾಗಿದೆ’ ಎಂದು ಪಾಲಿಕೆ ಸದಸ್ಯ ಆಂಜನಪ್ಪ ಹೇಳಿದರು.