ದೊಡ್ಡಬಳ್ಳಾಪುರ: ಸದಾನಂದ ಗೌಡರು ಹಿರಿಯರು. ಅವರ ಮಾತಿಗೆ ನನ್ನ ಸಹಮತವಿದೆ. ಯಾರನ್ನೂ ಅವಹೇಳನ ಮಾಡಬಾರದು ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದರು. ರಾಜ್ಯದಲ್ಲಿ ಆಯ್ಕೆಯಾಗಿರುವ 25 ಸಂಸದರಲ್ಲಿ 13 ಜನ ಮುದುಕರು, ಅನಾರೋಗ್ಯ ಪೀಡಿತರೆಂದು ಬಿಂಬಿಸಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಸಂಸದ ಸದಾನಂದ ಗೌಡ ಬೇಸರ ವ್ಯಕ್ತಪಡಿಸಿದ್ದ ಕುರಿತು ಅವರಿಂದು ಪ್ರತಿಕ್ರಿಯೆ ನೀಡಿದರು.
ದೊಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನಿರಾಜು ಆಯೋಜಿಸಿದ್ದ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಆರ್. ಅಶೋಕ್ ಭಾಗವಹಿಸಿ, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹದಿಮೂರು ಹಾಲಿ ಬಿಜೆಪಿ ಸಂಸದರಿಗೆ ಟಿಕೇಟ್ ಕೈ ತಪ್ಪುವ ಸಾಧ್ಯತೆ ಇದೆ ಎಂಬ ವದಂತಿ ಬಗ್ಗೆ ಮಾತನಾಡುತ್ತಾ, ಇದು ಸುಳ್ಳು ಸುದ್ದಿ, ಕಿಡಿಗೇಡಿಗಳು ಮಾಡಿರುವ ಕೆಲಸ. ಹದಿಮೂರು ಜನರಿಗೆ ಟಿಕೇಟ್ ಕೈ ತಪ್ಪುವ ಬಗ್ಗೆ ರಾಜ್ಯ ಮತ್ತು ಕೇಂದ್ರ ನಾಯಕರು ಏನು ಹೇಳಿಲ್ಲ. ಟಿಕೆಟ್ ಯಾರಿಗೆ ಕೊಡಬೇಕೆಂಬುದರ ಬಗ್ಗೆ ರಾಜ್ಯ ಮತ್ತು ಕೇಂದ್ರ ಚುನಾವಣಾ ಸಮಿತಿ ತೀರ್ಮಾನಿಸುತ್ತೆ ಎಂದರು.
ಇದನ್ನೂ ಓದಿ: Congress Guarantees: ಗ್ಯಾರಂಟಿ ಯೋಜನೆಗಳ ಷರತ್ತಿನಲ್ಲಿ ಗೊಂದಲ; ಸದನದಲ್ಲಿ ಹೋರಾಟಕ್ಕೆ ಅಣಿಯಾದ ಬಿಜೆಪಿ
ಸದಾನಂದ ಗೌಡರು ಈಗ ಲೋಕಸಭಾ ಸದಸ್ಯರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದಲೇ ಸದಸ್ಯರಾಗಬಹುದು. ಅವರು ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಎಲ್ಲ ಅರ್ಹತೆಗಳು ಇವೆ ಎಂದು ಹೇಳಿದರು. ಬಿಜೆಪಿಯಲ್ಲಿ ಹಿರಿಯರನ್ನು ಮೂಲೆ ಗುಂಪು ಮಾಡಲಾಗುತ್ತಿದ್ದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಈಗಾಗಲೇ ನಿನ್ನೆ ಆತ್ಮಾವಲೋಕನ ಸಭೆಯಲ್ಲಿ ಸೋಲಿಗೆ ಏನು ಕಾರಣ ಮತ್ತು ಹಿರಿಯರು ಯಾರಿಗೆ ಟಿಕೆಟ್ ಕೈ ತಪ್ಪಿದೆ ಎಂಬ ಬಗ್ಗೆ ಚರ್ಚಿಸಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ತಪ್ಪುಗಳನ್ನು ಸರಿ ಮಾಡಿಕೊಂಡು, ಪಕ್ಷ ಸಂಘಟನೆ ಮಾಡುವುದೇ ನಮ್ಮ ಜವಾಬ್ದಾರಿ. ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಬಹಳ ದಿನ ರಾಜ್ಯದಲ್ಲಿ ಉಳಿಯುವುದಿಲ್ಲ ಎಂದ ಅವರು, ಹಿಂದೆ ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿದ್ದ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಈಗ ಕಾಯ್ದೆಗಳನ್ನು ಹಿಂಪಡೆಯಲಿ. ಅವರ ಸರ್ಕಾರ ಹೋದ ಮೇಲೆ ನಾವು ಮುಂದೆ ಮತ್ತೆ ಅವುಗಳನ್ನು ಜಾರಿಗೆ ತರುತ್ತೇವೆ ಎಂದರು. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದಕ್ಕೆ ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವದಲ್ಲಿದೆ ಎಂಬ ದೇವಗೌಡರ ಮಾತಿಗೆ, ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿದ್ದು ಅವರೇ, ಕೈ ಕೊಟ್ಟು ಹೋದವರೂ ಅವರೇ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಟ್ಟು, ಕಾಂಗ್ರೆಸ್ ಸಿದ್ದತೆಯ ಕಡೆಗಣನೆ: ಸೋಲಿಗೆ ಕಾರಣ ಕಂಡುಕೊಂಡ ಬಿಜೆಪಿ